ಪುಟ:ರಂಗಣ್ಣನ ಕನಸಿನ ದಿನಗಳು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ರಂಗಣ್ಣನ ಕನಸಿನ ದಿನಗಳು

ನಿಮ್ಮಂಥ ಸ್ನೇಹಿತರು ಬಂದರೆ ಯಧಾಶಕ್ತಿ ಕೊಡುತ್ತೇನೆ. ನನ್ನ ಸರ್ಕೀಟು ಜೀವನದ ಮರ್ಮ ಇದು. ಬೇರೆ ಏನೂ ಇಲ್ಲ.'

'ಹೌದು ಸ್ವಾಮಿ! ತಾವು ಹೇಳುವುದು ಸರಿ, ಹೊರಗೆ ಸುತ್ತಾಡುವ ಮನುಷ್ಯರು ಪುಷ್ಟಿಯಾಗಿ ಊಟಾ ಮಾಡಬೇಕು.'

'ನಾನು ಊಟ ಮಾಡುವಾಗಲೆಲ್ಲ ಬಡ ಉಪಾಧ್ಯಾಯಯರ ನೆನಪು ನನಗೆ ಬರುತ್ತದೆ ಗೌಡರೆ !'

'ಹಾದು ಸ್ವಾಮಿ! ಉಪಾಧ್ಯಾಯರಿಗೆ ಸಂಬಳ ಸಾಲದು. ಅದರಲ್ಲೂ ಆ ಗ್ರಾಂಟು ಸ್ಕೂಲ್ ಮೇಷ್ಟ ರುಗಳ ಗೋಳು ಹೇಳೋಕ್ಕಾಗೋದಿಲ್ಲ. ಏನು ಸ್ವಾಮಿ ! ಏಳು ರುಪಾಯಿ, ಎಂಟು ರುಪಾಯಿಗೆ ಜೀವನ ಹೇಗೆ ಮಾಡೋದು ? ಅವುಗಳನ್ನೆಲ್ಲ ಸರ್ಕಾರಿ ಸ್ಕೂಲುಗಳನ್ನಾಗಿ ಮಾಡಿಬಿಡಿ ಸ್ವಾಮಿ.'

'ಸರ್ಕಾರದಲ್ಲಿ ಹಣ ಇಲ್ಲ ಅನ್ನುತ್ತಾರೆ. ಮಾಡುವ ಖರ್ಚುಗಳನ್ನೇನೋ ಬೇರೆ ಕಡೆಗಳಲ್ಲಿ ಮಾಡಿ ಬಿಡುತ್ತಾರೆ ದೇಶಕ್ಕೆ ಇರುವುದೇ ವಿದ್ಯೆ, ಅದೇ ಸಂಪತ್ತು. ಆ ಉಪಾಧ್ಯಾಯರ ಸ್ಥಿತಿ, ಆ ವಿದ್ಯಾಭ್ಯಾಸದ ಸ್ಥಿತಿ ಜ್ಞಾಪಕಕ್ಕೆ ಬಂದುಬಿಟ್ಟರೆ ಬಹಳ ದುಃಖವಾಗುತ್ತದೆ.'

'ನಾವೇನು ಮಾಡುವುದು ಸ್ವಾಮಿ! ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಮೇಲಿನವರೋ ಬರಿಯ ಥಳಕು ಬಳಕು. ಮೊಟಾರುಗಳಲ್ಲಿ ಬಂದವರು ಬಂದದ್ದೇ, ಹೋದವರು ಹೋದದ್ದೆ ! ನಮ್ಮ ಊರಿನ ಕೆರೆ ಆರು ವರ್ಷಗಳಿಂದ ನಾದುರಸ್ತಿನಲ್ಲಿದೆ. ಎಷ್ಟು ಅರ್ಜಿ ಕೊಟ್ಟರೂ ಕೇಳುವವರೇ ಇಲ್ಲ '

'ಹೀಗೆ ! ನಡೆಯಲಿ ದರ್ಬಾರು. ಏನು ಗೌಡರು ಇಷ್ಟು ದೂರ ಬಂದದ್ದು ?'

'ಇಲ್ಲೇ ನಮ್ಮ ನೆಂಟರನ್ನ ನೋಡೋಣ ಅಂತ ಬಂದಿದ್ದೆ. ಸ್ವಾಮಿ ಯವರು ಸರ್ಕಿಟು ಬಂದಿದ್ದೀರಿ ಎನ್ನುವುದು ತಿಳಿಯಿತು. ಕಂಡು ಹೋಗೋಣ, ನಮ್ಮ ಹಳ್ಳಿಗೆ ಯಾವಾಗ ದಯಮಾಡಿಸ್ತಿರೋ ಕೇಳಿ ಕೊಂಡು ಹೋಗೋಣ ಅಂತ ಬಂದೆ.'