ಪುಟ:ರಂಗಣ್ಣನ ಕನಸಿನ ದಿನಗಳು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡ ಬೋರೇಗೌಡರು

೬೩

'ಸ೦ತೋಷ ಗೌಡರೇ ! ನಾವೇನೂ ಇತರ ಇಲಾಖೆಗಳ ಅಧಿಕಾರಿಗಳಂತೆ ಪ್ರಭಾವಶಾಲಿಗಳಲ್ಲ. ವಿದ್ಯಾಭ್ಯಾಸದ ಇಲಾಖೆಯ ನೌಕರರನ್ನು ಆದರಿಸುವವರು ಯಾರಿದ್ದಾರೆ? ಅಪರೂಪವಾಗಿ ನಿಮ್ಮಂಥ ದೊಡ್ಡ ಮನಸ್ಸಿನ ದೊಡ್ಡ ಗೌಡರು ಅಷ್ಟೇ.'

'ಸ್ವಾಮಿ, ತಾವು ಉಪಾಧ್ಯಾಯರಿಗೆಲ್ಲ ತಿಳಿವಳಿಕೆ ಕೊಟ್ಟು ಬಹಳ ಚೆನ್ನಾಗಿ ಪಾಠ ಶಾಲೆಗಳನ್ನು ಅಭಿವೃದ್ಧಿ ಸ್ಥಿತಿಗೆ ತರುತ್ತಿದ್ದೀರಿ ಎಂದು ಎಲ್ಲರೂ ಹೊಗಳುತ್ತಾರೆ.'

'ಆ ಹೊಗಳಿಕೆ ನನಗೆ ಬೇಡ. ಈ ದಿನ ಹೊಗಳಿಕೆ ನಾಳೆ ತೆಗಳಿಕೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ರೂಢಿ. ನಿಮ್ಮ ಹಳ್ಳಿಗೆ ಬರಬೇಕೆಂದು ಹೇಳುತ್ತಿದ್ದೀರಿ. ನನ್ನ ಮಾತನ್ನು ನೀವು ನಡಸಿಕೊಡುವ ಭರವಸೆ ಕೊಟ್ಟರೆ ಬರುತ್ತೇನೆ' ಎಂದು ಹೇಳಿ ರಂಗಣ್ಣ ನಕ್ಕನು.

'ಅದೇನು ಸ್ವಾಮಿ ನಾನು ಮಾಡಬೇಕಾದ್ದು ? '

'ಗೌಡರೇ ! ಈಗ ನೋಡಿ, ನಮ್ಮ ಉಪಾಧ್ಯಾಯರ ಸಂಘಗಳು ಅಲ್ಲಲ್ಲಿ ಸಭೆ ಸೇರುತ್ತವೆ. ಉಪಾಧ್ಯಾಯರು ಸರಿಯಾಗಿ ಬರುವುದಿಲ್ಲ. ಒಂದು ಗಂಟೆಯ ಕಾಲ ಅಥವಾ ಒಂದೂವರೆ ಗಂಟೆಯ ಕಾಲ ಏನೋ ಭಾಷಣ, ತಪ್ಪು ತಪ್ಪಾಗಿ ಒಂದು ಮಾದರಿ ಪಾಠ, ಸ್ವಲ್ಪ ಸಂಗೀತ ಇಷ್ಟನ್ನು ಮಾಡಿ ಊರುಗಳಿಗೆ ಹೊರಟುಹೋಗುತ್ತಾರೆ. ಪಾಠಶಾಲೆಗಳಲ್ಲಿ ನೋಡಿದರೆ ಟ್ರೈನಿಂಗ್ ಆದ ಉಪಾಧ್ಯಾಯ ಯರ ಸಂಖ್ಯೆ ಕಡಮೆ ; ಆಗಿದ್ದವರು ಎಲ್ಲವನ್ನೂ ಮರೆತುಕೊಂಡಿದ್ದಾರೆ. ಈ ಸಂಘದ ಸಭೆಗೆ ಇಲ್ಲಿ ನಿಜವಾಗಿಯೂ ಅವರಿಗೆ ಉಪಕಾರವಾಗುವ ಕೆಲಸ ನಡೆಯಬೇಕು. ಅದನ್ನು ಬಹಳ ದಿನಗಳಿಂದ ಆಲೋಚನೆ ಮಾಡುತ್ತಿದ್ದೇನೆ. ನಿಮಗೆ ದೇವರು ಕೃಪೆ ತೋರಿದ್ದಾನೆ ; ನೆಮ್ಮದಿ ಕುಳ ನೀವು. ನೀವು ಬಡ ಮೇಷ್ಟ ರುಗಳ ಮೇಲೆ ಕೃಪೆ ತೋರಿ ಒಪ್ಪತ್ತು ಅವರಿಗೆ ಊಟ ಹಾಕುವ ಏರ್ಪಾಟು ಮಾಡಿದರೆ ಆ ಸಭೆಯಲ್ಲಿ ಏನು ಕೆಲಸ ಮಾಡಬಹುದೆಂಬುದನ್ನು ನಾನು ತೋರಿಸುತ್ತೇನೆ. ವರ್ಷಕ್ಕೆ ಒಂದು ದಿನ, ಒಪ್ಪೊತ್ತು, ಮೇಷ್ಟರಿಗೆ ಅನ್ನ ಹಾಕಬೇಕು, ಅಷ್ಟೇ ನನ್ನ ಕೋರಿಕೆ'