ಪುಟ:ರಂಗಣ್ಣನ ಕನಸಿನ ದಿನಗಳು.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ರಂಗಣ್ಣನ ಕನಸಿನ ದಿನಗಳು

ಮಾಡಿಬಿಟ್ಟರು. ಆ ಮೇಲೆ ಈ ಹಳ್ಳಿ ಆ ಹಳ್ಳಿ, ಸುತ್ತಲಹಳ್ಳಿ ಎಲ್ಲ ಕಡೆಗಳಿಂದಲೂ ಷೋಕಿ ಹುಡುಗರು, ಹಾಲು ಮಾರೊ ಯುವಕರು ಬರುವುದಕ್ಕೆ ಪ್ರಾರಂಭಿಸಿದರು, ಬರಬರುತಾ ಗಿರಾಕಿ ಜಾಸ್ತಿ ಆಗಿ ಹೋಯಿತು. ಈಗ ಮೇಷ್ಟರ ಕಲಸಕ್ಕೆ ರಾಜೀನಾಮೆ ಕೊಟ್ಟು ಬಿಟ್ಟು ಈ ಕಟ್ಟಡದಲ್ಲೇ ಸೆಲೂನ್ ಮಡಗೋಣ ಅಂತ ಇದ್ದೀನಿ.'

'ಕೆಲಸಕ್ಕೆ ರಾಜೀನಾಮೆ ಕೊಡುತ್ತೀರಾ ಮೇಷ್ಟೆ ? ಈಗ ದಿನಕ್ಕೆ ಎಷ್ಟು ರೂಪಾಯಿ ಸಂಪಾದನೆ ಇದೆ ನಿಮಗೆ ??

'ದಿನಕ್ಕೆ ಎರಡು ರೂಪಾಯಿ ಗಿಟ್ಟುತ್ತೆ ಸಾರ್. ನನ್ನ ಖರ್ಚು ದಿನಕ್ಕೆ ಎಂಟಾಣೆ ಆಗುತ್ತೆ. ಒಟ್ಟಿನಲ್ಲಿ ತಿಂಗಳಿಗೆ ನಲವತ್ತು ನಲವತ್ತೈದು ರೂಪಾಯಿಗಳಿಗೆ ಮೋಸವಿಲ್ಲ. ಈಗ ಮೇಷ್ಟರ ಕೆಲಸ, ನನ್ನ ಕಸುಬಿನ ಕೆಲಸ ಎರಡೂ ಒಟ್ಟಿಗೆ ನಡೆಯೋದು ಕಷ್ಟ ಸಾರ್‌. ನಾನು ಪಾಠಶಾಲೆ ಹೊತ್ತಿನಲ್ಲಿ ಕಸುಬಿನ ಕೆಲಸ ಮಾಡುವುದಿಲ್ಲ. ಬೆಳಗ್ಗೆ ಆರೂವರೆಯಿಂದ ಏಳೂಕಾಲು ಗಂಟೆಯವರೆಗೆ, ಪುನಃ ಹತ್ತೂ ಮುಕ್ಕಾಲರಿಂದ ಹನ್ನೆರಡೂ ಮುಕ್ಕಾಲು ಗಂಟೆವರೆಗೆ ಕಸುಬಿನ ಕೆಲಸ ಮಾಡ್ತೀನೆ. ಕೆಲವರು ಮಧ್ಯಾಹ್ನ ಒಂದು ಗಂಟೆಗೆ ಎರಡು ಗಂಟಿಗೋ ಬರ್ತಾರೆ. ಒಂದೊಂದು ದಿನ ಹಳ್ಳಿ ಕಡೆಯಿಂದ ಕೆಲವರು ಒ೦ಬತ್ತು ಗಂಟೆಗೇನೆ ಬಂದು ಕುಳಿತುಕೊಳ್ಳುತ್ತಾರೆ.'

'ಮೇಷ್ಟರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸೆಲೂನ್ ಮಡಗಿ, ಕಸುಬು ಬಿಡಬೇಡಿ.'

'ನನಗೂ ಹಾಗೆ ಅನ್ನಿಸಿದೆ ಸಾರ್. ಮನೇಲಿ ನನ್ನ ಹೆಂಡತಿ ಹಟಾ ಮಾಡ್ತಾಳೆ. ಈ ಕಟ್ಟಡದಾಗೆ ಇಸ್ಕೊಲ್ ಬೇಡ ; ಅವರು ಕೊಡೊ ಎರಡು ರೂಪಾಯಿ ಬಾಡಿಗೆ ನಮ್ಗೆ ಬೇಡ ; ಎರಡೊರ್ಸ ಆಗೋಯ್ತು, ಬಾಡಿಗೆ ಚಿಕ್ಕಾಸೂ ಬಂದಿಲ್ಲ. ಇಸ್ಕೊಲ್ ಎಲ್ಲಾದ್ರೂ ಮಾಡಿಕೊಳ್ಳಲಿ. ನಿಮ್ಮ ತಮ್ಮನಿಗೆ ಸೆಲೂನ್ ಕೆಲಸ ನೋಡಿಕೊಳ್ಳೋ ಹಾಗೆ ಮಾಡಿ. ನೀವು ಮೇಷ್ಟರ ಕೆಲಸದ ಜೊತೆಗೆ ಮಧ್ಯೆ ಮಧ್ಯೆ ತಲೆ ಕೆರೀರಿ, ರಜಾ ಬಂದಾಗ ನೀವೇನು ಮಾಡೋಕು- ಅಂತಾ ಹಟಾ ಮಾಡ್ತಾಳೆ.'