ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಪ೦ಪರಾಮಾಯಣದ ಕಥೆ

ಆಶ್ವಾಸ ೬-ವನ ಪ್ರಯಾಣ
ರಾಮ ಲಕ್ಷ್ಮಣರಿಗುಂಟಾದ ಅಗಣ್ಯ ಪುಣ್ಯ ಪ್ರಭಾವವನ್ನು ಕಂಡು ಭರತನು ಅವರಂತೆ ಸಿರಿಯ ಮಹಿಮೆಯೂ ತನಗಾಗಲಿಲ್ಲವೆಂಬ ಮನೋವ್ಯಥೆಯಿ೦ದ ತಪಸ್ಸಿಗೆ ಹೋಗಲು ಆಲೋಚಿಸುತ್ತಿರುವನೆಂದು ಕೈಕೆಯು ತಿಳಿದು ಆ ವೃತ್ತಾಂತ ವನ್ನು ಪತಿಯೊಡನೆ ಏಕಾಂತದಲ್ಲಿ ಹೇಳಿ, ಭರತನಿಗೆ ಕನಕನ ಮಗಳನ್ನು ಮದುವೆ ಮಾಡಿಸಿ ಅವನನ್ನು ಮೋಹಪಾಶದಲ್ಲಿ ತೊಡರಿಸುವಂತೆ ಕೇಳಿಕೊಂಡಳು. ದಶ ರಥನು ಅದಕ್ಕೆ ಒಪ್ಪಿ ಕನಕನನ್ನು ಕೇಳಲು, ಆತನೂ ಈ ಸಂಬಂಧಕ್ಕೆ ಸಂತೋಷದೊಡನೆ ಅನುಮತಿ ಕೊಟ್ಟನು. ಶುಭಮುಹೂರ್ತದಲ್ಲಿ ಬಹಳ ವೈಭವ ದಿಂದ ಮದುವೆಯು ನಡೆಯಿತು.
ಇತ್ತ, ಜನಕನೊಡನೆ ಮಿಥಿಲೆಗೆ ಬಂದಿದ್ದ ವಿದ್ಯಾಧರ ಮಹತ್ತರನು ರಥ ನೂಪುರಚಕ್ರವಾಳ ಪುರಕ್ಕೆ ಹಿಂದಿರುಗಿ ಹೋಗಿ ರಾಮಲಕ್ಷ್ಮಣರ ಪ್ರಭಾವವನ್ನು ಇಂದುಗತಿಗೆ ತಿಳಿಸಲು ಆತನು ನಿಶ್ಚಯವಾಗಿ ಅವರು ಕಾರಣಪುರುಷರೆಂದರಿತು ಭರತ ಖಂಡಕ್ಕೆಲ್ಲ ಪ್ರಭುಗಳಾದಾರೆಂಬ ಭಯದಿಂದ ಕಳೆಗುಂದಿದನು. ಪ್ರಭಾ ಮಂಡಲನು ಸೀತಾ ವಿರಹದಿಂದ ವಿಷಾದಗೊಂಡು ರಾಮಲಕ್ಷ್ಮಣರ ಮಹಿಮೆ ಯನ್ನು ಸಹಿಸಲಾರದೆ ಅವರನ್ನು ಜಯಿಸಿ ಸೀತೆಯನ್ನು ತರುವೆನೆಂದು ಗರ್ಜಿಸಿ ತಕ್ಕ ಪರಿವಾರದೊಡನೆ ಹೊರಟು ಗಗನಮಾರ್ಗದಲ್ಲಿ ಹೋಗುತ್ಯ ದಿಕ್ಕುಗಳನ್ನು ನೋಡಲು ಪೂರ್ವಜನ್ಮದ ಸ್ಮರಣೆ ಬಂದು ಮೂರ್ಛಹೋದನು. ಆಗ ಪರಿಜನರು ಆತನನ್ನು ಇಂದುಗತಿಯ ಬಳಿಗೆ ಕರೆತಂದರು, ಕೈ ತೋಪಚಾರಗಳಿಂದ ಮೂರ್ಛ ತಿಳಿದು ಪ್ರಭಾಮಂಡಲನು ತನ್ನ ಪೂರ್ವವೃತ್ತಾಂತವನ್ನು ತಂದೆಗೆ ತಿಳಿಸಿ ಸೀತೆಯು ತನ್ನ ತಂಗಿಯೆಂದರಿಯದೆ ಆಕೆಯನ್ನು ಮೋಹಿಸಿದುದಕ್ಕಾಗಿ ವ್ಯಥೆಪಟ್ಟನು. ಇಂದುಗತಿಯು ಇದೆಲ್ಲವನ್ನೂ ನೋಡಿ ವಿಸ್ಮಯಪಟ್ಟು ಪ್ರಭಾಮಂಡಲನಿಗೆ ರಾಜ್ಯ ವನ್ನೊಪ್ಪಿಸಿ ತಾನು ಸರ್ವಭೂತಹಿತ ಭಟ್ಟಾರಕರ ಬಳಿಯಲ್ಲಿ ದೀಕ್ಷೆಗೊಂಡನು.
ಮಿಥಿಲೆಯಲ್ಲಿ ಜನಕನು ಸೀತೆಗೆ ವಸ್ತುವಾಹನಾದಿಗಳನ್ನು ಬಳಿವಳಿ ಕೊಟ್ಟು ಆಕೆಯನ್ನು ದಶರಥನೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿಸಿದನು. ದಶರಥನು ಕೆಲವು ದಿನಗಳಲ್ಲಿ ವಿನೀತಾನಗರವನ್ನು ಸೇರಿರಲು, ಒಂದು ದಿನ ಚಾರ ನೊಬ್ಬನು ಬಂದು ಸರಯೂ ನದೀ ತೀರದ ಮಹೇಂದ್ರೋದ್ಯಾನ ವನದಲ್ಲಿ ಸರ್ವ ಭೂತಹಿತ ಭಟ್ಟಾರಕರು ಮಹಾಮುನಿಗಳ ಸಮುದಾಯದೊಡನೆ ಯೋಗನಿಷ್ಠೆ ಯಿಂದಿರುವರೆಂದು ತಿಳಿಸಿದನು. ದಶರಥನು ಬಹಳ ಭಕ್ತಿಯಿಂದೆದ್ದು ಆ ಕಡೆಗೆ ಕೈ ಮುಗಿದು ಕೂಡಲೆ ಹೊರಟು ಉದ್ಯಾನವನಕ್ಕೆ ಬಂದು ಮುನಿಯನ್ನರ್ಚಿಸಿ ವಂದನೆ ಮಾಡಿ ರಾಮ ಲಕ್ಷ್ಮಣ ಭರತ ಶತ್ರುಘ್ನರೊಡನೆ ಸಮುಚಿತಾಸನದಲ್ಲಿ ಕುಳಿತು, ದೀಕ್ಷಿತನಾದ ಇಂದುಗತಿಯನ್ನೂ ಬಾಡಿದ ಮುಖವುಳ್ಳ ಪ್ರಭಾಮಂಡಲನನ್ನೂ