ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

12

ಪ೦ಪರಾಮಾಯಣದ ಕಥೆ

ಮಯನಾದ ನಿನ್ನನ್ನು ಪಡೆದಿರುವೆನು. ನನ್ನ ತಂದೆಯು ಒಂದು ತಿಂಗಳ ಕೂಸಾದ ನನಗೆ ಪಟ್ಟವನ್ನು ಕಟ್ಟಿ ತಪೋರಾಜ್ಯವನ್ನು ಪಡೆದನು. ನೀನು ಪ್ರಾಪ್ತ ವಯಸ್ಕ ನಾಗಿರುವುದರಿಂದ ರಾಜ್ಯಭಾರವನ್ನು ವಹಿಸು; ತಪಃಶ್ರೀಯನ್ನು ಸೇರಬೇಕೆ೦ ದಿರುವ ನನ್ನ ಕೋರಿಕೆಯನ್ನು ಈಡೇರಿಸು; ತಂದೆಯ ಮಾತನ್ನು ಮಾರುವುದು ನಮ್ಮ ವಂಶಕ್ಕೆ ಬಂದುದಲ್ಲ” ಎಂದು ಹೇಳಿ ಮರುಮಾತಿಗೆಡೆಗುಡದೆ ನುಡಿದು ರಾಮನನ್ನು ಒಪ್ಪಿಸಿದನು. ಆಗ ಭರತನು ತಂದೆಯೊಡನೆ ತಾನೂ ತಪಸ್ಸಿಗೆ ಹೊರಡುವೆನೆಂದು ನಿಶ್ಚಯಿಸಿ ಬಿನ್ನವಿಸಲು ಈ ವಾರ್ತೆಯನ್ನು , ಆ ಸಭೆಯಲ್ಲಿದ್ದವ ನೊಬ್ಬನು ಓಡಿ ಹೋಗಿ ಕೈಕೆಗೆ ತಿಳಿಸಿದನು. ಆಕೆಯು ಇದನ್ನು ಕೇಳಿ ವಿಕಲೆ ಯಾಗಿ ತನಗಿನ್ನು ಮೇಲೆ ಕಿಂಕರಭಾವವು ಬರುವುದೆಂದು ಹಂಬಲಿಸುತ್ತಿರಲು ಪತಿಯು ಆಕೆಗೆ ಕೊಟ್ಟಿದ್ದ ವರವು ನೆನಪಿಗೆ ಬಂದಿತ್ತು. ಆಕೆಯು ಕೂಡಲೆ ಹೊರಟು ದಶರಥನ ಬಳಿಗೆ ಬಂದು ತನಗೆ ವಾಗ್ದಾನಮಾಡಿದ್ದ ವರವನ್ನು ಕೊಡೆಂದು ಆತನನ್ನು ಕೇಳಿದಳು. ಆಗ ದಶರಥನು ತನ್ನ ತಪೋವನ ಗಮನಕ್ಕೆ ನಿಮ್ಮ ಕರ ವಲ್ಲದುದನ್ನು ಬೇಡಿಕೊಳ್ಳೆ ನಲು, ಆಕೆಯು ಭರತನಿಗೆ ರಾಜ್ಯವನ್ನು ಹದಿನಾಲ್ಕು ವರುಷಗಳ ಪರ್ಯ೦ತ ಕೊಡೆಂದು ಕೇಳಿದಳು. ಈ ಮಾತು ಕಿವಿಗೆ ಬೀಳುತ್ತಲೆ ದಶರಥನು ಮನನೊಂದು ಚಿಂತಾಕ್ರಾಂತನಾದನು. ಭರತನು ತನ್ನ ತಾಯಿಯು ಇಂತಹ ತಪ್ಪು ಕೆಲಸವನ್ನು ಮಾಡಿದಳಲ್ಲಾ ಎಂದು ನೊಂದನು ; ಸಭೆಯಲ್ಲಿದ್ದವರೆಲ್ಲರೂ ಕೈಕೆಯನ್ನು ದೂಷಿಸಿದರು.
ಇದೆಲ್ಲವನ್ನೂ ನೋಡಿ ಹಲಾಯುಧನಾದ ರಾಮನು ತಂದೆಯ ಭಾಷೆ ತಪ್ಪದಂತೆಯೂ ಚಿಕ್ಕತಾಯಿಯಾದ ಕೈಕೆಯ ಮನೋರಥವು ಈಡೇರುವಂತೆಯೂ ರಾಜ್ಯವನ್ನು ಸಂತೋಷದಿಂದ ಭರತನಿಗೆ ಕೊಟ್ಟು ಕೃತಾರ್ಥನಾಗುವೆನೆಂದು ಹರ್ಷವನ್ನು ತಾಳಿ ಕೈಕೆಗೆ ಅದನ್ನು ತಿಳಿಸಿದನು. ತರುವಾಯ ಆತನು ತಂದೆಯನ್ನು ನೋಡಿ ರಾಜ್ಯವು ತನಗಾದರೇನು ಭರತನಿಗಾದರೇನು ? ಅಣ್ಣ ತಮ್ಮಂದಿರಲ್ಲಿ ಭೇದಭಾವವಿಲ್ಲವೆಂದು ನುಡಿದು, ಭಾಷೆಗೆ ತಪ್ಪುವುದು ಸರ್ವಥಾ ಸರಿಯಲ್ಲವೆಂದು ತಿಳಿಸಿ, ತಾನು ಆ ಹದಿನಾಲ್ಕು ವರ್ಷಗಳು ದಿಗ್ವಯ ಯಾತ್ರೆಗೆ ಹೋಗಿ ಬರುವೆನೆಂದೂ ಭರತನಿಗೆ ಕೂಡಲೆ ಪಟ್ಟವನ್ನು ಕಟ್ಟಬೇಕೆಂದೂ ಹೇಳಿ ದನು. ಆಗ ಭರತನು ಕಿರಿಯನಾದ ತಾನು ಹಿರಿಯನ ರಾಜ್ಯವನ್ನು ಬಯಸು ವುದು ತಕ್ಕದಲ್ಲವೆಂದೂ ತಪೋರಾಜ್ಯವೇ ತನ್ನ ಮನಸ್ಸಿಗೊಪ್ಪಿದುದೆಂದೂ ತಂದೆಗೆ ತಿಳಿಸಿದನು. ಅದಕ್ಕೆ ದಶರಥನು ಅಣ್ಣನ ಮಾತಿಗವಿಧೇಯವಾಗಿ ನುಡಿವುದು ಸರಿಯಲ್ಲವೆಂದು ಭರತನಿಗೆ ಹೇಳಲು, ಆತನು ಮರುಮಾತಾಡಲಾರದೆ ನಿ೦ತಿರು ವಲ್ಲಿ ರಾಮನು “ ಭರತನೇ, ಭಾಷೆಗೆ ತಪ್ಪಿದರೆ ತಂದೆಯ ಯಶಸ್ಸು ಹೋಗು ವುದು; ನಿನ್ನ ಅಗಲಿಕೆಯಿಂದ ನಿನ್ನ ತಾಯಿಗೆ ಪ್ರಾಣ ಹಾನಿಯಾಗುವುದು ; ಆದುದ