ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

17

ಸುಗುಣಕ್ಕೆ ಮೆಚ್ಚಿ ಸಿ೦ಹೋದರನಿಗೂ ವಜ್ರ ಕರ್ಣನಿಗೂ ಪರಸ್ಪರ ಸ್ನೇಹವನ್ನುಂಟು ಮಾಡಿ ರಾಜ್ಯವನ್ನು ಭಾಗಮಾಡಿ ಕೊಟ್ಟನು. ವಜ್ರ ಕರ್ಣನು ರಾಮಲಕ್ಷ್ಮಣರನ್ನು ಬಹಳವಾಗಿ ಸತ್ಕರಿಸಿ ತನ್ನ ಎಂಟುಮಂದಿ ಹೆಣ್ಣು ಮಕ್ಕಳನ್ನು ಲಕ್ಷ್ಮಣನಿಗೆ ಕೊಟ್ಟು ಮದುವೆಮಾಡಿದನು. ಉಳಿದ ರಾಜರು ತಮ್ಮ ಮುನ್ನೂರುಮಂದಿ ಕನ್ನಿಕೆಯರನ್ನು ಲಕ್ಷ್ಮಣನಿಗೆ ಮದುವೆಮಾಡಿ ಕೊಟ್ಟರು. ರಾಮಲಕ್ಷ್ಮಣರು ಸಿ೦ಹೋದರನನ್ನು ಉಜ್ಜಯಿನಿಗೆ ಕಳುಹಿ ದಶಪುರದಲ್ಲಿ ಕೆಲವು ದಿನವಿರುವಲ್ಲಿ ಬೇಸಗೆ ಬಂದಿತು.
ಆಗ ರಾಮಲಕ್ಷ್ಮಣರು ಸೀತಾಸಮೇತರಾಗಿ ದಕ್ಷಿಣ ದಿಕ್ಕನ್ನು ಹಿಡಿದು ಒಂದು ದೊಡ್ಡ ಕಾಡು ದಾರಿಯಲ್ಲಿ ಹೊರಟರು. ಬಿಸಿಲಿನ ಬೇಗೆಯು ಹೆಚ್ಚಿ ಸೀತೆಯು ಬಳಲಿ ಬಾಯಾರಿ ಒ೦ದು ಆಲದ ಮರದ ಕೆಳಗೆ ನಿಂತಿರಲು ಲಕ್ಷ್ಮಣನು ನೀರನ್ನು ತರುವ ನಿಮಿತ್ತವಾಗಿ ಮುಂದಿದ್ದ ಒ೦ದು ವನಕ್ಕೆ ಹೋಗಿ ಅಲ್ಲಿದ್ದ ಕೊಳದಲ್ಲಿ ನೀರನ್ನು ಮೊಗೆದುಕೊಂಡು ಬರುತ್ತಿರುವಲ್ಲಿ, ಅವನೆದುರಿಗೆ ಕಾಮನ ಪ್ರತಿ ರೂಪೆಂಬಂತೆ ಬರುತ್ತ ಅವನನ್ನು ನೋಡಿ ಮೋಹಗೊ೦ಡ ಗ೦ಡುವೇಷ ಹಾಕಿ ಕೊಂಡಿರುವ ಒಬ್ಬ ಬಾಲೆಯನ್ನು ಕಂಡನು. ಅವಳ ವೃತ್ತಾಂತವನ್ನು ವಿಚಾರಿಸಲು, ಆ ಪುರವನ್ನಾಳುತ್ತಿದ್ದ ಆಕೆಯ ತಂದೆಯಾದ ವಾಲಖಿಲ್ಯನನ್ನು ಮೇಚ್ಛ ರಾಜನೊಬ್ಬನು ಸೆರೆ ಹಿಡಿದುಕೊಂಡು ಹೋಗಿರುವನೆಂತಲೂ ಅದನ್ನು ಅವಂತೀ ಪುರದೊಡೆಯನಾದ ಸಿ೦ಹೋದರನು ಕೇಳಿ, ವಾಲಖಿಲ್ಯನಿಗೆ ಗಂಡುಮಕ್ಕಳಿಲ್ಲದುದರಿಂದ, ಗರ್ಭಿಣಿಯಾಗಿರುವ ವಾಲಖಿಲ್ಯನ ರಾಣಿಯು ಗಂಡುಮಗುವನ್ನು ಹೆತ್ತರೆ ಅವನೇ ನೆಲಕೊಡೆಯನಾಗಬಹುದೆಂದೂ ಇಲ್ಲದಿದ್ದರೆ ತಾನು ರಾಜ್ಯವನ್ನು ಆಕ್ರ ಮಿಸಿಕೊಳ್ಳುವೆನೆಂದೂ ಹೇಳಿ ಹೋಗಲು, ರಾಣಿಯು ಹೆಣ್ಣು ಮಗುವನ್ನು ಹೆತ್ತದ್ದರಿಂದ ವಾಲಖಿಲ್ಯನ ಮಂತ್ರಿಯು ಉಪಾಯಮಾಡಿ ಆ ಮಗುವನ್ನು ಗಂಡೆಂದು ಪ್ರಸಿದ್ದಿ ಪಡಿಸಿ ನಡೆಯಿಸುತ್ತಿರುವನೆಂದೂ, ಆಕೆಯನ್ನು ಹೆಣ್ಣೆಂದು ತಿಳಿದು ಕೈ ಹಿಡಿದವನೇ ವಾಲ ಖಿಲ್ಯನನ್ನು ಬಂಧನದಿಂದ ಬಿಡಿಸುವನೆಂದು ಒಬ್ಬ ದಿವ್ಯಜ್ಞಾನಿಯು ಹೇಳಿರುವ ನೆಂದೂ ತಿಳಿಯಬಂದಿತು. ಲಕ್ಷ್ಮಣನು ಇದನ್ನು ಕೇಳಿ ಆ ಹುಡುಗಿಯನ್ನೂ ಆಕೆಯ ತಾಯಿಯನ್ನೂ ಸಮಾಧಾನಗೊಳಿಸಿ, ವಾಲಖಿಲ್ಯನನ್ನು ಸೆರೆಯಿಂದ ಬಿಡಿಸಿಕೊಂಡು ಬಂದು ಆ ಕನೈಯನ್ನು ಮದುವೆಮಾಡಿಕೊಳ್ಳ ವೆನೆ೦ದು ಸೀತಾದೇವಿಗೆ ತಿಳಿಸಿ ಹೊರಟು, ಆ ಪ್ರಬಲರಾದ ಬೇಡರ ಸೈನ್ಯವನ್ನು ನಿರ್ಮೂಲಮಾಡಲು, ಅವರೊಡೆಯ ನಾದ ರೌದ್ರಭೂತಿಯು ಭಯಗೊಂಡು ಲಕ್ಷಣನಿಗೆ ಶರಣಾಗತನಾದನು. ಆಗ ವಾಲಖಿಲ್ಯನನ್ನು ಸೆರೆಯಿಂದ ಬಿಡಿಸಿ ಕರೆತರುವಂತೆ ಅವನಿಗೆ ಹೇಳಲು ಅವನು ಮಹಾ ಪ್ರಸಾದವೆಂದು ಹೇಳಿ ಕೂಡಲೆ ವಾಲಖಿಲ್ಯನನ್ನು ಕರೆತಂದನು. ವಾಲಖಿಲ್ಯನು ರಾಮಲಕ್ಷ್ಮಣರಿಗೆ ಭಕ್ತಿಯಿಂದೆರಗಿ ಅವರನ್ನು ಸಹಸ್ರಮುಖದಿಂದ ಸ್ತುತಿಸಿ ಅವರೊಡನೆ ತನ್ನ ರಾಜ್ಯವನ್ನು ಸೇರಿ ಶುಭ ಮುಹೂರ್ತದಲ್ಲಿ ತನ್ನ ಮಗಳನ್ನು ಲಕ್ಷ್ಮಣನಿಗೆ ಬಹಳ ವೈಭವದಿಂದ ಮದುವೆಮಾಡಿಕೊಟ್ಟು ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು.
3