ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ಪಂಪ ರಾಮಾಯಣದ ಕಥೆ

ಈತನ ಸುಂದರಾಕಾರವನ್ನು ನೋಡಿ, ಶಕ್ತಿಯಿಂದಿಡುವುದಕ್ಕೆ ಇಷ್ಟವಿಲ್ಲದಿರಲು, ಲಕ್ಷಣನು ಆ ಶಕ್ತಿಯ ಬಲವನ್ನು ನೋಡುವೆನೆಂದು ಹೇಳಿ ಅದನ್ನು ತರಿಸಿದನು. ಆಗ ಅದನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಲು, ಕಡೆಗಾಲದ ಸಿಡಿಲಂತೆ ಕಿಡಿಯನ್ನು ಕಾರುತ್ತ ಬರುವ ಆ ಶಕ್ತಿಯನ್ನು ಲಕ್ಷ್ಮಣನು ತನ್ನ ಎಡಗೈಯಿಂದ ಬಲಗುಂದಿಸಿ ದನು. ಅದನ್ನು ನೋಡಿ ಶತ್ರುಂದವನು ಭಯಪಟ್ಟು ಲಕ್ಷ್ಮಣನಿಗೆ ನಮಸ್ಕಾರ ಮಾಡಿ, ಕ್ಷಮಿಸಬೇಕೆಂದು ಬೇಡಿಕೊಂಡು, ಸೀತಾರಾಮರಿದಲ್ಲಿಗೆ ತನ್ನ ಪರಿವಾರ ದೊಡನೆ ಹೋಗಿ ಅವರನ್ನು ಪೂಜಿಸಿ ತನ್ನರಮನೆಗೆ ಕರೆದುಕೊಂಡು ಬಂದು ಶುಭ ಮುಹೂರ್ತದಲ್ಲಿ ಲಕ್ಷ್ಮಣನಿಗೆ ಜಿತಪದ್ಮೆಯನ್ನು ಕೊಟ್ಟು, ವೈಭವದಿಂದ ಮದುವೆ ಮಾಡಿದನು.
ಅಲ್ಲಿ ಕೆಲವು ದಿನಗಳಿದ್ದು ಮೂವರೂ ಪೂರ್ವಾಭಿಮುಖವಾಗಿ ಪ್ರಯಾಣ ಹೊರಟು ವಂಶಸ್ಥಲವೆ೦ಬ ಪಟ್ಟಣವನ್ನು ಸೇರಿದರು. ಆ ಸಮೀಪದಲ್ಲಿದ ಬೆಟ್ಟದ ಕಡೆಯಿಂದ ಸಂಜೆಯ ಹೊತ್ತಿನಲ್ಲಿ ದೆಸೆಗೆಟ್ಟೋಡುವ ಪುರಜನರನ್ನು ನೋಡಿ ರಘು ವೀರನು ಇದೇನು ಕಾರಣ ನೆಂದು ಕೇಳಲು, ಮೂರು ದಿನಗಳಿಂದ ರಾತ್ರಿಯ ವೇಳೆ ಆ ಬೆಟ್ಟದ ಶಿಖರದಲ್ಲಿ ಅತಿ ಭಯಂಕರವಾದ ಸಿಡಿಲ ದನಿಯಾಗುತ್ತಿರುವುದೆಂದೂ ಇದಕ್ಕಂಜಿ ಪಟ್ಟಣದಲ್ಲಿರುವವರೆಲ್ಲರೂ ಓಡಿ ಹೋಗುತ್ತಿರುವರೆಂದೂ ಹೇಳಿದರು. ಈ ಶಬ್ದವನ್ನು ಮಾಡುವರು ಯಾರಿರಬಹುದೆಂದು ತಿಳಿಯುವುದಕ್ಕಾಗಿ ಇವರು ಬೆಟ್ಟವನ್ನು ಹತ್ತಿದರು. ಅಲ್ಲಿ ನಿಶ್ಚಲವಾಗಿ ತಪಸ್ಸು ಮಾಡುತ್ತಿದ್ದ ಋಷಿಯೊಬ್ಬನನ್ನು ಕಂಡು ಅವನ ಬಳಿಗೆ ಬರಲು, ಅವನನ್ನು ಸುತ್ತಿ ಮುತ್ತಿದ್ದ ಹಾವುಗಳೂ ಚೇಳು ಗಳೂ ರಾಮಲಕ್ಷ್ಮಣರ ಪುಣ್ಯ ಪ್ರಭಾವದಿಂದ ಮಾಯವಾದುವು. ರಾತ್ರಿಯಾಗು ತಲೆ ಬಹಳ ಭಯಂಕರವಾದ ಭೂತ ಬೇತಾಳಗಳೂ ಸಿ೦ಹ ಶರಭ ಶಾರ್ದೂಲ ಗಳೂ ಮಿಂಚು ಗುಡುಗಿನೊಡನೆ ಸುರಿಯುವ ಬಿಸುನೆತ್ತರ ಮಳೆಯೂ ಕಾಣಿಸಿ ಕೊಂಡುವು. ಆಗ ರಾಮಲಕ್ಷ್ಮಣರು ಆ ಮುನಿಗೆ ಈ ರೀತಿಯಾಗಿ ತೊಂದರೆ ಕೊಡುತ್ತಿರುವವನ ಬಲವನ್ನು ಮುರಿಯಬೇಕೆಂದು ತಮ್ಮ ಧನುಸ್ಸುಗಳನ್ನೇರಿಸಿ ಟಂಕಾರವನ್ನು ಮಾಡಲು-ಅಗ್ನಿ ಪ್ರಭನೆಂಬ ಆ ದೇವನು ಭಯಪಟ್ಟು, ಭಗ್ತಾಶನಾಗಿ ಇವರು ಎಂಟನೆಯ ಬಲದೇವ ವಾಸುದೇವರೆ೦ದು ಜ್ಞಾನದೃಷ್ಟಿಯಿಂದ ತಿಳಿದು ತನ್ನ ಜ್ಯೋತಿರ್ಲೋಕಕ್ಕೆ ಓಡಿ ಹೋದನು. ಈ ತೊಂದರೆಗಳಾವುವನ್ನೂ ಲಕ್ಷ ಮಾಡದೆ ಬೆಟ್ಟದಂತೆ ನಿಶ್ಚಲವಾಗಿದ್ದ ದೇಶಭೂಷಣ ಮುನಿಯನ್ನು ಕಂಡು ರಾಘವನು ಕೈ ಮುಗಿದುಕೊಂಡು ಈ ತೊಂದರೆಗಳಿಗೆ ಕಾರಣವೇನೆಂದು ಕೇಳಲು, ಆ ಮುನಿಯು ಜನ್ಮಾಂತರದ ಕಾರಣಗಳನ್ನು ವಿಶದವಾಗಿ ತಿಳಿಸಿ ತನ್ನ ಪೂರ್ವಜನ್ಮದ ಶತ್ರುವಾದ ಅಗ್ನಿಪ್ರಭದೇವನು ತನ್ನ ತಪವನ್ನು ಕೆಡಿಸುವ ಪ್ರಯತ್ನದಲ್ಲಿದ್ದನೆಂದೂ ಪುಣ್ಯ ಪುರುಷನಾದ ರಾಮನು ಬಂದುದರಿಂದ ಆತನಿಗೆ ಹೆದರಿ ಓಡಿಹೋದನೆಂದೂ ಹೇಳಲು ರಾಮನು ಸಂತೋಷಪಟ್ಟನು. ಮುನಿಯು ರಾಮನ ಪ್ರತಿಜ್ಞಾಪರಿ