ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

70

ಪ೦ಪರಾಮಾಯಣದ ಕಥೆ

ನಮಸ್ಕರಿಸಿ ದುಃಖಪಡಲು, ಪ್ರಭಾಮಂಡಲನು ರಾಮಲಕ್ಷ್ಮಣರ ದೆಸೆಯಿಂದ ಮಕ್ಕಳಿಗೆ ಪ್ರಮಾದವಾಗಬಹುದೆಂದು ಹೇಳಿ ಸೀತಾದೇವಿಯನ್ನೂ ಲವಾಂಕುಶರ ಅರಸಿಯರನ್ನೂ ತನ್ನ ವಿಮಾನವನ್ನೇರಿಸಿಕೊಂಡು ಆಕಾಶಮಾರ್ಗದಿಂದ ಬಂದು ಲವಾಂಕುಶರನ್ನು ಸೇರಿದನು.
ಇತ್ತ, ಬಲಾಚ್ಯುತರು ತಮ್ಮ ಪರಾಕ್ರಮವನ್ನು ಲೆಕ್ಕಿಸದೆ ಪರಸೈನ್ಯವು ಬಂದಿತೆ೦ದು ಕುಪಿತರಾಗಿ ತಮ್ಮ ಸೇನೆಯೊಡನೆ ಹೊರಟು ಲವಾ೦ಕುಶರನ್ನು ಎದುರಿಸಿ ಕಾದಿ ಗೆಲ್ಲಲಾರದೆ ಹೋದರು. ಲವನು ರಾಘವನ ಧ್ವಜವನ್ನೂ ಧನು ಸೃನ್ನೂ ರಥವನ್ನೂ ಮುರಿದು ಹೋಗುವಂತೆ ಹೊಡೆದು ರಾಮನನ್ನು ನಿರಥ ನನ್ನಾಗಿ ಮಾಡಿದನು. ಆಗ ರಾಮನು ಮತ್ತೊಂದು ರಥವನ್ನೇರಿ ಮಹಾಯುದ್ಧ ವನ್ನು ಮಾಡಿ ದಿವ್ಯಾಸ್ತ್ರಗಳಿ೦ದಲೂ ಅವನನ್ನು ಸೋಲಿಸಲಾರದೆ ವಿಸ್ಮಿತ ಚಿತ್ತನಾಗಿರುವಲ್ಲಿ, ಲಕ್ಷಣನು ಕುರನೊಡನೆ ಹೋರಾಡಿ ಗೆಲ್ಲಲಾರದೆ ಕಡೆಗೆ ಚಕ್ರದಿಂದಿಡಲು ಆ ಚಕ್ರವು ಕುಶನನ್ನು ನೆಡಲೊಲ್ಲದೆ ಅಲ್ಲಿಯೇ ಸುತ್ತಾಡುತ್ತಿತ್ತು. ಲಕ್ಷಣನು ಕುಶನಿಂದ ಸೋತವನಾಗಿ ತಮ್ಮ ಪುಣ್ಯ ಪ್ರಭಾವವು ತೊಲಗಿತೆಂ ದೆಣಿಸಿ ಅವರು ಬಲದೇವ ವಾಸುದೇವರಾದರೆಂದೂ ತಮಗಜೇಯರೆಂದೂ ನಿಶ್ಚ ಯಿಸಿ ಯುದ್ಧವನ್ನು ನಿಲ್ಲಿಸಿರಲು, ಆ ಸಮಯದಲ್ಲಿ ನಾರದನು ನಭದಲ್ಲಿದ್ದು ನಗುತ್ತ, “ ಅಯಾ! ಬಲದೇವ ವಾಸುದೇವರೆಂಬ ಮಹಿಮೆ ನಿಮಗಲ್ಲದೆ ಇತ ರರಿಗೆ ಸಲ್ಲುವುದುಂಟ ? ಇವರು ಸೀತಾದೇವಿಯ ಕುಮಾರರು, ಲವಾ೦ಕುಶರೆಂಬ ವರು ; ತಮ್ಮ ತಾಯಿಯನ್ನು ಅವಿಚಾರದಿಂದ ಹೊರಡಿಸಿ ಕಳೆದುದಕ್ಕಾಗಿ ಮುಸಿದು ನಿಮ್ಮನ್ನು ಈ ತೆರದಿಂದ ಕಾಣುವುದಕ್ಕೆ ಬಂದಿರುವರು " ಎ೦ದು ಹೇಳಲು, ಲಕ್ಷಣನು ಸಂತೋಷಾತಿಶಯದಿಂದ ರಾಮನ ಬಳಿಗೆ ಬಂದು ಈ ವೃತ್ತಾಂತ ವನ್ನು ತಿಳಿಸಿದನು. ಇದನ್ನು ಕೇಳಿ ರಾಮಸ್ವಾಮಿಯು ಅತ್ಯಾಶ್ಚರದಿಂದಲೂ ಸಂತೋಷದಿಂದಲೂ ಮೈಮರೆತವನಾಗಿ ಮಕ್ಕಳನ್ನು ಆಗ ತಾನೆ ಪಡೆದವನಂತೆ ಅನುರಾಗ ಹೊಂದಿ ರಥದಿಂದಿಳಿದು ಲಕ್ಷ್ಮಣನೊಡನೆ ಲವಾ೦ಕುಶರಿರುವ ಸ್ಥಳಕ್ಕೆ ಬರುತ್ತಿರಲು ಅವರು ಆನೆಗಳಿ೦ದಿಳಿದು ಸಂಭ್ರಮದಿಂದ ಎದುರಾಗಿ ಬಂದು ರಾಮನ ಪಾದಗಳ ಮೇಲೆ ಬಿದ್ದರು. ರಾಮಚ೦ದ್ರನು ಅವರನ್ನೆತ್ತಿ ಬಿಗಿದಪ್ಪಿ ಕೊಂಡು ಸಂತೋಷ ಸಾಗರದಲ್ಲಿ ಮುಳುಗಿದನು. ಲವಾ೦ಕುಶರು ತರುವಾಯ ಲಕ್ಷ್ಮಣನನ್ನು ನಮಸ್ಕರಿಸಿ ಆಶೀರ್ವಾದವನ್ನು ಪಡೆದರು. ಹೀಗೆ ರಾಮಲಕ್ಷ್ಮಣರು ಸುಖಾನುಭವದಿಂದ ತಣಿದು ಆನಂದ ಬಾಷ್ಪಗಳನ್ನು ಸುರಿಸುತ್ತ ಪುಳ ಕಾಂಕಿತ ರಾಗಿರುವಲ್ಲಿ ವಿಮಾನಾರೂಢಿಯಾದ ಸೀತಾದೇವಿಯು ಮಕ್ಕಳ ಪರಾಕ್ರಮವನ್ನೂ ಅವರು ತಂದೆಯೊಡನೆ ಸೇರಿದುದನ್ನೂ ಕಂಡು ಸಂತೋಷಪಟ್ಟು ಪುಂಡರೀಕಿಣೀ ಪುರಕ್ಕೆ ಹಿಂದಿರುಗಿ ಹೋದಳು. ರಾಮಲಕ್ಷ್ಮಣರು ಲವಾ೦ಕುಶರೊಡನೆ ಮಹಾ ವೈಭವದಿಂದ ಸಾಕೇತಪುರವನ್ನು ಹೊಕ್ಕು ಸುಖದಿಂದಿದ್ದರು.