ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪ / ವಾಗರ್ಥ

ಕಾಲದಲ್ಲೆಲ್ಲ ಇಂತಹ ಮೌಖಿಕ ವಿಮರ್ಶೆ ಇರುತ್ತದೆ. ಪ್ರದರ್ಶನ ಜರಗುವ ಬಯಲಲ್ಲಿ, ಸಭಾಭವನದಲ್ಲಿ, ಹೊಟೇಲು ಅಂಗಡಿಗಳಲ್ಲಿ, ಮಿತ್ರಕೂಟಗಳಲ್ಲಿ, ಸಮಾರಂಭಗಳಲ್ಲಿ, ಮನೆಗಳಲ್ಲಿ- ಹೀಗೆ ಎಲ್ಲೆಡೆ ಇದು ವಿಪುಲವಾಗಿ ನಡೆಯುತ್ತ ಇರುತ್ತದೆ. ಇದೊಂದು ಬಗೆಯ ಜಾನಪದ ವಿಮರ್ಶೆ ಅನ್ನಬಹುದು. ಇಲ್ಲಿ ಕೆಲವೊಮ್ಮೆ ಉನ್ನತವಾದ ವಿವೇಚನೆ, ತೀಕ್ಷ್ಣ ಒಳನೋಟಗಳು ಕಾಣಸಿಗುತ್ತವೆ. ಅನುಭವೀ ಪ್ರೇಕ್ಷಕರ ಸಂಗ್ರಹದಲ್ಲಿ ಅಮೂಲ್ಯವಾದ ನೆನಪುಗಳು, ಘಟನೆಗಳು ಇರುತ್ತವೆ. ನಮಗೆ ಒಂದೆರಡು ತಲೆಮಾರು ಹಿಂದಿನವರೆಗೆ, ಚಾಚುವ ಕಲೆಯ ಇತಿಹಾಸದ ಅಂಶಗಳು ದೊರಕುವುದು ಇಂತಹ ಬಾಯ್ದೆರೆ ವಿಮರ್ಶೆಗಳಿಂದಲೇ. ಜನರು ಈ ಕಲೆಯ ಬಗ್ಗೆ ಹೃತ್ಪೂರ್ವಕ ಸ್ಪಂದಿಸು ವುದಕ್ಕೆ ಇಂತಹ ಮಾತುಕತೆಗಳು ಒಂದು ಮಾಧ್ಯಮ.

ಆದರೆ, ಈ ಬಗೆಯ ವಿಮರ್ಶೆಯೆಂಬುದು ಮುಖ್ಯವಾಗಿ ತಾತ್ಕಾಲಿಕ ವಾದ ಪ್ರತಿಕ್ರಿಯೆಯಾಗಿರುತ್ತದೆ. ಪಾರ್ಶ್ವಿಕ ದೃಷ್ಟಿ ಇಲ್ಲಿನ ಮುಖ್ಯ ಲಕ್ಷಣ. ಇಲ್ಲಿ ಪ್ರದರ್ಶನದ ಒಂದು ಅಂಶ, ಒಂದು ಘಟನೆ, ಒಬ್ಬಿಬ್ಬರು ಕಲಾವಿದರನ್ನಾಧರಿಸಿದ ವಿವೇಚನೆ ಹೆಚ್ಚು ಅಭಿಮಾನ ಪೂರ್ವಕ ಪ್ರಶಂಸೆಗಳು, ವ್ಯಕ್ತಿಪರವಾದ ಹೊಗಳಿಕೆ, ತಿರಸ್ಕಾರಗಳು ಇಲ್ಲಿ ಮುಖ್ಯವಾಗುತ್ತವೆ. ಪ್ರಶಂಸೆಗಳು ಕತೆಗಳಾಗಿ, ದಂತಕತೆಗಳಾಗುವುದೂ ಉಂಟು.

“ಸಾಮಾನ್ಯವಾಗಿ ಇಂತಹ ವಿಮರ್ಶೆಗಳಲ್ಲಿ ಯಕ್ಷಗಾನದ ಒಂದೊಂದು ಅಂಗಗಳ ಬಗೆಗಿನ ಒಲವು ಹೆಚ್ಚು ಇದ್ದು, ವಿಮರ್ಶೆಯ ಒತ್ತು ಹಾಡುಗಾರಿಕೆ, ಮಾತು ಮುಂತಾದ ಒಂದೊಂದು ಅಂಶಗಳ ಮೇಲೆ ಅಥವಾ ವ್ಯಕ್ತಿಗತವಾದ ಒಲವಿನಿಂದ ಕಲಾವಿದರ ಮೇಲೆ ಇರುತ್ತದೆ. ಇದರಿಂದಾಗಿ ಒಟ್ಟು ರಂಗಭೂಮಿಯ ಪರಿಕಲ್ಪನೆಗೆ ಸಂಬಂಧಿಸಿದ ಮುಖ್ಯ ವಿಷಯಗಳು ಮರೆಯಾಗುತ್ತವೆ" (ಡಾ| ಬಿ. ಎ. ವಿವೇಕ ರೈ : ಖಾಸಗಿ ಚರ್ಚೆಯಲ್ಲಿ ತಿಳಿಸಿದ ವಿಚಾರ).

ಎಂತಿದ್ದರೂ ಅಭಿರುಚಿಯ ಪ್ರಸರಣ ಮತ್ತು ಜೀವಂತಿಕೆಯಲ್ಲಿ ಇಂತಹ ವಿಮರ್ಶೆಗಳು ಮಹತ್ವದ ಕೊಡುಗೆ ನೀಡಿವೆ. ಯಕ್ಷಗಾನ ವಲಯದ ಖಾಸಗಿ ವಿಮರ್ಶೆಗಳನ್ನು ಕ್ರೋಡೀಕರಿಸಿ ಅಧ್ಯಯನ ನಡೆಸುವ ಕೆಲಸ ಆಗಬೇಕಾಗಿದೆ.