ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಪಠ್ಯ : ವಿವಿಧ ಹಂತಗಳು / ೧೧೧

ರೂಪಗಳು ಹಲವಾದರೂ, ಬಳಸುವ ಪ್ರಸಂಗದ ವಿಧಗಳು ಅದೇ ಆಗಿರುತ್ತವೆ. ಆದರೂ, ಇನ್ನಷ್ಟು ಸೂಕ್ಷ್ಮವಾದ ಮಟ್ಟಕ್ಕೆ ಹೋಗುವಾಗ, ಪ್ರಸಂಗದ ಪಾಠವೂ ಪ್ರದರ್ಶನ ಸಂದರ್ಭಗಳಲ್ಲಿ ಪೂರ್ತಿ ಸ್ಥಿರವಲ್ಲ. ಪ್ರಸಂಗದಲ್ಲಿರುವ ಪದ್ಯಗಳನ್ನೆಲ್ಲ ಪ್ರದರ್ಶನದಲ್ಲಿ ಹಾಡುವುದು ವಿರಳ. ಅಲ್ಲಿ ಆರಿಸುವಿಕೆ ಅಥವಾ ಪ್ರಸಂಗ ಸಂಪಾದನ (editing) ಜರಗುತ್ತದೆ. ಇದು ಭಾಗವತರ ಕೆಲಸ. ಹೀಗೆ ಬಹುಕಾಲ ಒಂದು ಬಗೆಯಿಂದ ಆರಿಸುವಿಕೆ ನಡೆದಾಗ, ಒಂದು ಮೇಳದಲ್ಲಿ ಅಥವಾ ತಿಟ್ಟಿನಲ್ಲಿ ಒಂದು ಬಗೆಯ ಸಂಕ್ಷೇಪ ಪಠ್ಯ ಸಿದ್ಧವಾಗುತ್ತದೆ. ಇದೇ ಮಾಮೂಲು ಪದ್ಯಗಳು ಎನಿಸುತ್ತದೆ. ಈ ಮಾಮೂಲು ಕೂಡ ಪೂರ್ತಿ ನಿಶ್ಚಿತವಲ್ಲ. ಅವು ಒಂದೊಂದು ಮೇಳಕ್ಕೆ ಒಂದೊಂದು ರೀತಿ ಇರಬಹುದು. ಅವು ಒಬ್ಬೊಬ್ಬ ಭಾಗವತರು ಅನುಸರಿಸುವ ಕ್ರಮವನ್ನು ಹೊಂದಿಕೊಂಡಿವೆ. ಪ್ರದರ್ಶನಕ್ಕೆ ಆರಿಸಿದ ಇತರ ಪ್ರಸಂಗಗಳೂ, ಅದೊಂದು ಇಲ್ಲಿ ನಿರ್ಣಾಯಕ. ಕೃಷ್ಣಾರ್ಜುನ ಪ್ರಸಂಗವನ್ನು ಒಂದು ಗಂಟೆ, ಎರಡು ಗಂಟೆ, ಮೂರು ಗಂಟೆ ಅಥವಾ ಇಡಿಯ ರಾತ್ರಿಗೆ ಆಡಬೇಕಾದಾಗ ಪದ್ಯ ಸಂಖ್ಯೆ ಮತ್ತು ಆಯ್ದುಕೊಳ್ಳುವ ಸನ್ನಿವೇಶಗಳು ಬೇರೆ ಬೇರೆ ಆಗುತ್ತವೆ. ಲಭ್ಯವಿರುವ ಕಲಾವಿದರ ತಂಡದ ಸ್ವರೂಪವೂ ಪ್ರಸಂಗ ಭಾಗಗಳ ಆಯ್ಕೆಗೆ ಪ್ರೇರಕ, ಉದಾ: ಹೆಚ್ಚುವರಿ ಬಣ್ಣದ ವೇಷ (ರಾಕ್ಷಸ ಪಾತ್ರಧಾರಿ) ತಂಡದಲ್ಲಿದ್ದರೆ, ಉದಾಹರಿಸಿದ ಕೃಷ್ಣಾರ್ಜುನ ಪ್ರಸಂಗ ದಲ್ಲಿ ಕಿಮ್ಮಿರ ವಧಾಭಾಗವನ್ನೋ, ಘಟೋತ್ಕಚನ ಯುದ್ಧವನ್ನೋ, ಸೇರಿಸುವ ಆವಶ್ಯಕತೆ ಉಂಟಾಗಬಹುದು. ಜೊತೆಗೆ ಭಾಗವತರು ಪ್ರಸಂಗದ ಮಧ್ಯೆ ಅಗತ್ಯಕ್ಕನುಸರಿಸಿ 'ಕಿಸೆ ಪದ್ಯ' (ಸ್ವಂತದ ರಚನೆ ಅಥವಾ ಬೇರೆ, ಪ್ರಸಂಗದ ಪದ್ಯಗಳು)ವನ್ನು ಸೇರಿಸುವುದಿದೆ. ಹೀಗೆ ಪ್ರದರ್ಶನಕ್ಕೆ ಅಳವಡಿಸುವ ಪ್ರಸಂಗ ಪಾಠವು ಈ ಸಂಗತಿಗಳನ್ನು ಹೊಂದಿಕೊಂಡಿದೆ:

  • ಪ್ರಸಂಗ ಸಂಪಾದನೆಯ ಪರಂಪರೆ
  • ತಿಟ್ಟು ಯಾ ತಂಡದ ಪರಂಪರ
  • ಭಾಗವತರ ವೈಯಕ್ತಿಕ ಆಯ್ಕೆಗಳು
  • ಪ್ರದರ್ಶನದ ಅವಧಿ
  • ಈ ದಿನ ಬೇರೊಂದು ಪ್ರಸಂಗ

(ಜೊತೆ ಪ್ರಸಂಗ, ತುಂಡು ಪ್ರಸಂಗ)