ಹೀಗಾಗಿ ಕ, ಖ, ಗ, ಘ ಎಂಬ ನಾಲ್ಕು ಕಲಾವಿದರಿಗೆ, ಪ್ರದರ್ಶನ
ಗಳಲ್ಲಿ ಅವೇ ಅವೇ ಪಾತ್ರಗಳನ್ನೇ ನೀಡಿದರೂ, ಪ್ರದರ್ಶನದಿಂದ
ಪ್ರದರ್ಶನಕ್ಕೆ ಅರ್ಥಸಾಹಿತ್ಯ ಬದಲಾಗುತ್ತದೆ. ಪಾತ್ರಗಳನ್ನೂ
ಬದಲಿಸಿದರೆ ಇನ್ನಷ್ಟು ಬದಲಾಗುತ್ತದೆ. ಒಬ್ಬ ಕಲಾವಿದನ ಸ್ವಂತ
ಪಠ್ಯವೂ, ಒಂದು ತಂಡದ ಒಂದು ಪಠ್ಯವೂ ನಿರಂತರ ಚಲನಶೀಲ
ಮತ್ತು 'ಚರ'. ಇದು ವ್ಯಕ್ತಿ, ಕಾಲ, ದೇಶ, ಸಂದರ್ಭ ಸಾಪೇಕ್ಷ, ಮೇಲೆ
ಅರ್ಥಗಾರಿಕೆಯ ಕುರಿತು ಹೇಳುವ ಮಾತುಗಳನ್ನೆ ಬೇರೊಂದು ರೀತಿ
ಯಲ್ಲಿ ಕುಣಿತ, ಅಭಿನಯ, ಚಲನೆಗಳ ಮೂಲಕ ರಂಗಪಾಠದ ಕುರಿತೂ
ಪ್ರಸಂಗ 'ನಡೆ'ಗಳ ಬಗೆಗೂ ಹೇಳಬಹುದು.
ಪ್ರಸಂಗದ ಪಠ್ಯದ ಕೊನೆಯ ಹಂತ ರಂಗದ ಹೊರಗಿದೆ.
ರಂಗದಲ್ಲಿ ನೀಡಿದ ಪಠ್ಯವು ಪ್ರೇಕ್ಷಕರಿಗೆ ತಲುಪುವುದು ಒಂದೇ ತೆರನಾಗಿ
ಅಲ್ಲ. ಪ್ರೇಕ್ಷಕನ ಗ್ರಹಿಕೆ ಮತ್ತು ಸ್ಪಂದನಗಳನ್ನು ಹೊಂದಿಕೊಂಡು
ಹಲವು ಬಗೆಯಾಗಿ ಆಗಬಹುದು. ಪ್ರೇಕ್ಷಕರೆಷ್ಟೋ ಅಷ್ಟು ಗ್ರಹಿಕೆಗಳಿವೆ
ಎಂದೂ ಹೇಳಬಹುದು. ಹೀಗೆ ಆಕರದಿಂದ ಪ್ರಸಂಗಕ್ಕೆ, ಪ್ರಸಂಗದಿಂದ
ಸಂಗೀತಕ್ಕೆ, ಸಂಗೀತದಿಂದ ಅರ್ಥಕ್ಕೆ ಸಾಗುವ ಪಠ್ಯದ ಪರಿವರ್ತನಶೀಲ
ಸ್ವರೂಪ ಕಲಾಸ್ವಾದಕನ ಮಟ್ಟದಲ್ಲಿ ಬಹುತ್ವದ ಪರಾಕಾಷ್ಠೆಯನ್ನು
ತಲುಪುತ್ತದೆ.
ಪ್ರೇಕ್ಷಕನಿಗೆ ತಲುಪಿದ ಪಠ್ಯ ಅದರಲ್ಲಿ ಅರ್ಥಗಳನ್ನು ಹೊಳೆಯಿಸಿ
ಚರ್ಚೆಗಳನ್ನು ಪ್ರೇರಿಸುತ್ತದೆ. ಅದೇ ಆಸ್ವಾದನೆ, ವಿಮರ್ಶೆಗಳಿಗೆ
ಕಾರಣವಾಗುತ್ತದೆ. ಪ್ರೇಕ್ಷಕನ ಸ್ಪಂದನ, ಪ್ರತಿಕ್ರಿಯೆಗಳ ಸ್ವರೂಪವು
(ಅಥವಾ ಪ್ರತಿಕ್ರಿಯೆಯ ಅಭಾವ, ನಿರಾಕರಣೆ) ರಂಗದ ಮೇಲೆ
ಪರಿಣಾಮ ಬೀರಿ, ಪ್ರದರ್ಶನದ ರೀತಿಯನ್ನು ನಿರ್ಧರಿಸುವಲ್ಲಿ ಪಾತ್ರ
ವಹಿಸುತ್ತದೆ.
ಯಕ್ಷಗಾನದಂತೆ ಕೃತಿಯನ್ನೂ ಸ್ಥೂಲವಾಗಿ ಆಧರಿಸಿ, ಕಲಾವಿದರ
ಮನೋಧರ್ಮದ ಮೇಲೆ ರಂಗಕೃತಿಯು ನಿರ್ಮಿತವಾಗುವ ಪ್ರಕಾರ
ಗಳಲ್ಲಿ ಹೀಗೆ ಪರಿವರ್ತನೆಯ ತತ್ವ ಮತ್ತು ಪಾಠಗಳ ಬಹುತ್ವವೇ
ಕಲಾಕೃತಿಯ ಜೀವಾಳ ಮತ್ತು ಅದೇ ಕಲೆಯ ಸ್ವರೂಪದ ಮುಖ್ಯ
ಲಕ್ಷಣ ಕೂಡ ಆಗಿದೆ.
(ಹೊಂಗದಿರು: ಆನಂದಾಶ್ರಮ ಹೈಸ್ಕೂಲು ಸ್ವರ್ಣಮಹೋತ್ಸವ ಸಂಚಿಕೆ ೧೯೯೬)