ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಪ್ಪತ್ತೊಂದನೆಯ ಶತಮಾನದಲ್ಲಿ ಯಕ್ಷಗಾನ : ಪ್ರಸಂಗಗಳು



ಒಂದು ಕಲಾಪ್ರಕಾರ ಅಥವಾ ಯಾವುದೇ ವಿಶಿಷ್ಟ ಕ್ಷೇತ್ರ ಮುಂದ ಹೇಗೆ ಬೆಳೆದೀತು ಎಂದು ಭವಿಷ್ಯ ನುಡಿಯುವುದು ಸಾಹಸದ ಮಾತು; ಕಷ್ಟದ ಕೆಲಸ, ಕಾರಣ ಕಲೆ, ಸಾಹಿತ್ಯ ಇತ್ಯಾದಿಗಳು ತಮ್ಮಷ್ಟಕ್ಕೆ ತಾವೇ ಉಳಿದು ಬೆಳೆಯುವಂತಹವುಗಳಲ್ಲ. ಒಟ್ಟು ಸಾಂಸ್ಕೃತಿಕ ಸಾಮಾಜಿಕ ಪರಿಸರ, ಪ್ರಭಾವಗಳಿಂದ ಪ್ರೇರಣೆಗಳನ್ನು ಪಡೆದು ರೂಪುಗೊಳ್ಳು ವಂತಹವುಗಳು. ಅಂತಹ ಪ್ರೇರಣೆಗಳ ಸ್ವರೂಪವನ್ನು ತಿಳಿದ ಹೊರತು, ಮುಂದಿನ ಸ್ವರೂಪ ಗೊತ್ತಾಗಲಾರದು. ಆದರೂ, ಈವರೆಗಿನ ಹಿನ್ನೆಲೆ ಮತ್ತು ಸದ್ಯದ ಸ್ಥಿತಿಗತಿಗಳನ್ನು ನೋಡಿ, ಅದರ ಆಧಾರದಲ್ಲಿ ಮುಂದಿನ ಸ್ಥಿತಿಗತಿಗಳ ಕುರಿತು ಒಂದು ಸ್ಥೂಲವಾದ ಊಹನೆಯನ್ನು ಮಾಡ ಬಹುದು.
. ಯಕ್ಷಗಾನದ ಆಟ, ತಾಳಮದ್ದಳೆ ಎಂಬ ಎರಡು ಬಗೆಯ ಪ್ರದರ್ಶನ ರೂಪಗಳಿಗೂ ಆಧಾರವಾಗಿರುವಂತಹುದು - ಯಕ್ಷಗಾನ ಪ್ರಸಂಗ, ಅರ್ಥಾತ್ ಯಕ್ಷಗಾನ ಪದ್ಮಪ್ರಬಂಧ, ಕನ್ನಡದಲ್ಲಿ ಪ್ರಾಯಶಃ ಸುಮಾರು ಕ್ರಿ.ಶ. ೧೫೦೦ರ ಹೊತ್ತಿಗೆ ಆರಂಭಗೊಂಡ ಈ ಬಗೆಯ ಸಾಹಿತ್ಯದಲ್ಲಿ ೧೯೩೦ರ ತನಕವೂ ಅಂತಹ ದೊಡ್ಡ ಬದಲಾವಣೆಗಳು ಆಗಲಿಲ್ಲ. ಶೈಲಿ, ಛಂದೋರೂಪಗಳಲ್ಲಿ ಅಷ್ಟಿಷ್ಟು ವ್ಯತ್ಯಾಸಗಳಾಗುತ್ತ ಬಂದರೂ, ವಸ್ತು, ಆಶಯಗಳಲ್ಲಿ ದೊಡ್ಡ ಪರಿವರ್ತನೆಗಳೇನೂ ಕಾಣಿಸುವುದಿಲ್ಲ. ಪೌರಾಣಿಕವಾದ ಕಥಾವಸ್ತು, ಪೌರಾಣಿಕ ಆಶಯ ಮತ್ತು ನಿರೂಪಣೆ ಇವುಗಳೇ ಮುಖ್ಯವಾಗಿದ್ದುವು. ಆದರೆ ಅನಂತರದ ಅವಧಿಯಲ್ಲಿ ಪ್ರಸಂಗ ಸಾಹಿತ್ಯವು ತೀವ್ರವಾದ ಬದಲಾವಣೆಗಳನ್ನು ಕಂಡಿತು. ಹೊಸ ಬಗೆಯ ರಚನೆಗಳು ಬರಲಾರಂಭಿಸಿದುವು, ಕೃತಿಗಳ ಗುಣಮಟ್ಟದ ವಿಚಾರ ಎಂತಿದ್ದರೂ, ವಸ್ತು ಮತ್ತು ಮಂಡನೆಗಳಲ್ಲಿ ಹಲವಾರು ರೀತಿಯ ಪ್ರಯೋಗಗಳಾದುವು. ೧೯೬೦ರ ನಂತರ ಈ ಪರಿವರ್ತನೆ ವೇಗವಾಗಿ ನಡೆಯಲಾರಂಭಿಸಿತು. ಮುಖ್ಯವಾಗಿ ವಸ್ತುವಿ ನಲ್ಲಿ, ಭಾಗಶಃ ರೀತಿಯಲ್ಲೂ ದೊಡ್ಡ ಪರಿವರ್ತನೆಗಳಾದುವು.