ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇಪ್ಪತ್ತೊಂದನೆಯ ಶತಮಾನದಲ್ಲಿ ಯಕ್ಷಗಾನ : ಪ್ರಸಂಗಗಳು / ೧೧೫

ನಾವೀನ್ಯದ ಬಯಕೆ ಸಹಜವಾದುದು. ನಾವೀನ್ಯದ ಪ್ರಯತ್ನವು ಚಡಪಡಿಕೆಯ ಲಕ್ಷಣ. ಅರ್ಥಪೂರ್ಣ ನಾವೀನ್ಯವು ಪ್ರಗತಿಯ ಲಕ್ಷಣ. ಶೈಲಿಬದ್ಧವಾದ ಮತ್ತು ಪುರಾಣಾಧಾರಿತ ಕಲೆಯಾಗಿ ಬೆಳೆದುದರಿಂದಲೋ ಏನೋ, ಯಕ್ಷಗಾನವು ಇಂತಹ ನಾವೀನ್ಯಗಳ ಕಡೆ ಹೊರಳಿದ್ದು ಈ ಶತಮಾನದ ಉತ್ತರಾರ್ಧದಲ್ಲೆ. ಹಿಂದಿನ ಶತಮಾನಗಳ ಯಕ್ಷಗಾನ ರಚನೆಗಳ ಪೈಕಿ, ಮಾನಸ ಚರಿತ್ರೆ (ಮನಸ್ಸಿನ ಗುಣಗಳನ್ನೆ ಪಾತ್ರ ಗಳನ್ನಾಗಿ ಚಿತ್ರಿಸಿದ್ದು), ಪಲಾಂಡು ಚರಿತ್ರೆ (ನೀರುಳ್ಳಿಯ ಕುರಿತು), ಮೋಹಿನಿ ಚರಿತ್ರೆ (ಹೊಗೆಸೊಪ್ಪು) ಇಂತಹ ಕೆಲವು ವಿಭಿನ್ನ ಕೃತಿಗಳು ಬಂದಿದ್ದರೂ, ಮಾನಸ ಚರಿತ್ರೆಯೊಂದೇ ಆ ಪೈಕಿ ಗಂಭೀರವಾದ ರಚನೆ.

ಈ ಶತಮಾನದ ವಿವಿಧ ಹಂತಗಳಲ್ಲಿ ಪ್ರಸಂಗ ರಚನೆಯಲ್ಲಿ ಹೊಸ ವಸ್ತುಗಳ ಸೇರ್ಪಡೆಯಾಯಿತು. ಅಪ್ರಸಿದ್ಧವಾಗಿದ್ದ ಪೌರಾಣಿಕ ಕತೆಗಳು ಬಳಕೆಗೆ ಬಂದುವು. ಅಲ್ಲದೆ ಜಾನಪದ ಕತೆಗಳು, ಕಂಪೆನಿ ನಾಟಕಗಳ ಕತೆಗಳು, ಭೂತಗಳ ಕತೆಗಳು, ಕಲ್ಪಿತ ಕತೆಗಳು, ಸಿನಿಮಾ ಕತೆಗಳ ಪ್ರೇರಣೆಯ ಕಥಾನಕಗಳು, ಸಂಸ್ಕೃತ ನಾಟಕಗಳು, ಕಥಾ ಸರಿತ್ಸಾಗರ, ವಿದೇಶೀ ಮೂಲದ ಕಥಾನಕಗಳು, ಪ್ರಸಂಗಗಳಾಗಿ ರಚನೆಗೊಂಡುವು. ಜತೆಗೆ ಹಲವು ಸಾಮಾಜಿಕ ವಸ್ತುಗಳು (ಉದಾ: ಕೃಷಿವಿಜಯ, ರಾತ್ರಿ ಶಾಲೆ) ಪ್ರಸಂಗಗಳಿಗೆ ವಸ್ತುವನ್ನೊದಗಿಸಿದುವು. ಸಾಮಯಿಕ, ರಾಜಕೀಯ ಪ್ರಸಂಗಗಳೂ ಬಂದುವು (ಕಾಶ್ಮೀರವಿಜಯ, ನಸ್ಸೇ‌ರ್ ಪ್ರತಾಪ), ಸ್ಥಳ ಮಹಾತ್ಮ್ಯೆಗಳೂ ವಿಪುಲವಾಗಿ ಪ್ರಸಂಗಗಳಾಗಿ ಬಂದಿವೆ. ಇದೀಗ ಸಾಕ್ಷರತಾ ಚಳವಳಿ, ಏಡ್ಸ್- ಮೊದಲಾದ ಸಂಗತಿಗಳೂ ಪ್ರಸಂಗಗಳಿಗೆ ವಸ್ತು ಒದಗಿಸಿವೆ. ಪಂದಿಬೆಟ್ಟು ವೆಂಕಟರಾಯರ “ಕೋಟಿಚೆನ್ನಯ" (೧೯೩೯)ದಿಂದ ಆರಂಭವಾದ ತುಳು ಪ್ರಸಂಗಗಳ ರಚನೆ ದೊಡ್ಡ ಗಾತ್ರದಲ್ಲಿ ಬೆಳೆದು ಬಂದಿದೆ. ಇಪ್ಪತ್ತೈದಕ್ಕೆ ಮಿಕ್ಕಿ ಪ್ರಸಂಗಗಳನ್ನು ರಚಿಸಿದ ಹಲವು ಕವಿಗಳು ಆಗಿದ್ದಾರೆ; ಇದ್ದಾರೆ. ವೃತ್ತಿಪರ ಮೇಳಗಳ ಆವಶ್ಯಕತೆ ಪೂರೈಸಲು ಪ್ರತಿವರ್ಷವೂ ಹೊಸ ಪ್ರಸಂಗಗಳ ರಚನೆ ಆಗುತ್ತಿದೆ.

ಹೀಗೆ ಬಂದ ರಚನೆಗಳಲ್ಲಿ ಉತ್ತಮವಾದುವುಗಳೂ, ಸಾಮಾನ್ಯ ವಾದುವುಗಳೂ, ಕಳಪೆ ಅನ್ನಬಹುದಾದುವೂ ಇವೆ. ಸಂಖ್ಯೆ ಹೆಚ್ಚಿದಾಗ ಗುಣಮಟ್ಟ ಕುಸಿಯುವುದೂ ಸಹಜವೇ ಆಗಿದೆ. ಪ್ರಸಂಗ ರಚನೆಯಲ್ಲಿ ನವೀನ ಸಂದೇಶವನ್ನು ಹೊಸ ಸಂಘರ್ಷವನ್ನು ತರುವ, ಹೊಸ