ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦ / ವಾಗರ್ಥ

ಮಹಾಭಾರತಗಳು ಸಹಿತ) ಹಂದರ, ಘಟನಾವಳಿಗಳ ಸಂಬಂಧ ಕಾರ್ಯ ಪರಿಣಾಮಗಳು- ಬಹುಪಕ್ಷ ತರ್ಕವನ್ನು, ವಾಸ್ತವದ ಪಾತಳಿಯನ್ನು ಅವಲಂಬಿಸಿರುವುದಿಲ್ಲ. ಹಾಗಿರುವುದೇ ಅದರ ಸ್ವಭಾವ. ಅದಕ್ಕಾಗಿಯೇ ಅದು ಪುರಾಣ. ಅರ್ಥಾತ್ ತರ್ಕಶುದ್ಧತೆ ಯಾ ತರ್ಕಬಂಧತೆ ಇಲ್ಲದಿರುವುದೇ ಪುರಾಣದ ಒಂದು ಮುಖ್ಯ ಲಕ್ಷಣ. ಅನುಭವವನ್ನು ಅದು ದಾಖಲಿಸುವ ದಾರಿ ಬೇರೆ ತೆರನಾದದ್ದು. ಆದರೆ ತಾಳಮದ್ದಳೆಯ ಅರ್ಥಗಾರಿಕೆ ತರ್ಕಕ್ಕೆ ವಿಚಾರಯುಕ್ತವಾಗಿ ಕಾರ್ಯಕಾರಣ ಸಂಬಂಧ ವಿವರಣೆಗೆ ಮಹತ್ವ ನೀಡುತ್ತದೆ. ತರ್ಕಾತೀತವಾದದ್ದು ಇಲ್ಲಿ ತೀಕ್ಷ್ಣ ತರ್ಕಕ್ಕೆ ಒಳಗಾಗುತ್ತದೆ. "ಒಪ್ಪಿಕೊಳ್ಳಲೇಬೇಕಾದ" ಅಂಶಗಳಾದ ಶಾಪ, ಅನುಗ್ರಹ, ವರ- ಇಂತಹುದನ್ನು ಬಿಟ್ಟು, ಉಳಿದುದೆಲ್ಲವೂ ತರ್ಕಕ್ಕೆ ಹಚ್ಚಲ್ಪಡುತ್ತವೆ. ಶಾಪ, ವರಾದಿ ಸ್ವೀಕೃತ ಅಂಶಗಳಲ್ಲೂ ಔಚಿತ್ಯ ಚರ್ಚೆ ನಡೆಯುತ್ತದೆ. ಪಾತ್ರಗಳು ತೀರ ಇರಿಸು-ಮುರುಸಿನ ಸವಾಲುಗಳನ್ನು ಇದಿರಿಸಬೇಕಾಗುತ್ತದೆ.

ವಾಲಿವಧೆಯ . ಉದಾಹರಣೆಯನ್ನೆ ತೆಗೆದುಕೊಳ್ಳೋಣ. ರಾಮನು ವಾಲಿಯನ್ನು ವಧಿಸಿದ ರೀತಿ, ಅದಕ್ಕೆ ವಾಲಿಯ ಆಕ್ಷೇಪ, ರಾಮನ ಸಮಾಧಾನ- ಇವು ರಾಮಾಯಣದಲ್ಲಿ ಒಂದು 'ಸರಣಿ'ಯಾಗಿವೆ ಹೊರತು, 'ಸಂವಾದ'ವಾಗಿ ಇಲ್ಲ. ರಾಮ ಹೇಳಿದುದನ್ನು ವಾಲಿ ಒಪ್ಪುತ್ತಾನೆ. ಅಲ್ಲಿ ಕಾವ್ಯದೊಳಗೆ ಪಾತ್ರಗಳ ಸ್ಥಾನರಚನೆಯೇ ಹಾಗಿದೆ. ತಾಳಮದ್ದಳೆಯ ವಾಲಿ ಹಾಗಿಲ್ಲ. ಅವನು ರಾಮನ ಆರ್ತ ರಕ್ಷಕತ್ವ, ಸುಗ್ರೀವ ಸಖ್ಯದ ವಿಧಾನ, ಪರಾಙ್ಮುಖ ವಧೆ, ಸ್ಮೃತಿಯ ಅನ್ವಯದ ಔಚಿತ್ಯ, ಸಂಸ್ಕೃತಿಗಳ ಭಿನ್ನತೆಯ ವಿಷಯ, ಆರ್ಯೀಕರಣ- ಈ ಎಲ್ಲ ನೆಲೆಗಳಲ್ಲಿ ವಾದಿಸುತ್ತಾನೆ. ರಾಮನಿಗೆ ಸಾಕುಬೇಕಾಗುತ್ತದೆ. ತಾಳ ಮದ್ದಳೆಯ ಕೌರವನು ಪಾಂಡವರ ಜನ್ಮ, ಆಚಾರ, ವ್ಯವಹಾರಗಳನ್ನು ವಿಮರ್ಶಿಸುತ್ತಾನೆ. ಇಂತಹ ಮತ್ತು ಇನ್ನೆಷ್ಟೋ ಸಂದರ್ಭಗಳನ್ನು ಹೇಳ ಬಹುದು. ಇಲ್ಲೆಲ್ಲ ವರ್ತಮಾನ ಚಿಂತನವೂ, ವಿಸ್ತ್ರತವಾಗಿ ಬೆಳೆದಿರುವ ಸಂಸ್ಕೃತಿ ಅಧ್ಯಯನವೂ ಪ್ರಾಯೋಗಿಕ ಅನ್ವಯಕ್ಕೆ ಒಳಗಾಗುತ್ತವೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಪ್ರವಾಹದ ವಿಭಿನ್ನ ಹಂತಗಳು ತಾಳಮದ್ದಳೆಯ ವೇದಿಕೆಯಲ್ಲಿ ವಿಚಿತ್ರವಾದೊಂದು ಪಾಕವಾಗಿ ಸಾಕಾರ ಗೊಳ್ಳುತ್ತವೆ. ಬಹುಶಃ ತಾಳಮದ್ದಳೆ ಈಗಲೂ ತನ್ನ ಪ್ರಸ್ತುತತೆಯನ್ನು, ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ, ಹೆಚ್ಚು ಹೆಚ್ಚು