ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ : ಕೆಲವು ಗ್ರಹಿಕೆಗಳು/ ೩೧

ಜನಪ್ರಿಯವಾಗುತ್ತಿರುವುದು, ಈ ದ್ವಂದ್ವಗಳ ಫಲಿತವಾದ ಸೃಷ್ಟಿ ಯಿಂದಲೇ ಆಗಿರಬೇಕು.

ಪುರಾಣದ ಪಾತ್ರಗಳಲ್ಲಿ ಸ್ವಭಾವತಃ ಇರುವ ಒರಟುತನವೂ ಕೂಡ ಸಾಮಾಜಿಕ ಪರಿವರ್ತನೆಯ ಪರಿಣಾಮವಾಗಿ, ಪ್ರಜಾತಂತ್ರ ವ್ಯವಸ್ಥೆ ಜನಮಾನಸದಲ್ಲಿ ಹೆಚ್ಚು ಹೆಚ್ಚು ಬೇರುಬಿಡುತ್ತಿರುವುದರ ಫಲವಾಗಿ, ಸೂಕ್ಷ್ಮತೆಯತ್ತ ಸಾಗುತ್ತಿದೆ. ಒಂದು ಉದಾಹರಣೆಯಾಗಿ ಕೃಷ್ಣ ಸಂಧಾನದ ಕೌರವನ ಪಾತ್ರವನ್ನು ನೋಡಬಹುದು. ಪಾಂಡವರಿಗೆ ರಾಜ್ಯ ದಲ್ಲಿ ಅಧಿಕಾರವಾಗಲಿ, ಪಾಲಿನ ಹಕ್ಕಾಗಲಿ ಇಲ್ಲವೆಂಬುದಕ್ಕೆ ಅವರು ಪಾಂಡುವಿನ ಮಕ್ಕಳಲ್ಲ; ದೇವನಿಯೋಗ ಜನ್ಯರು- ಎಂಬುದೇ ಹಿಂದಕ್ಕೆ ದುರ್ಯೋಧನನ ಮುಖ್ಯ ವಾದವಾಗಿರುವಂತೆ ಕಾಣುತ್ತದೆ. ಭಾಸನ ನಾಟಕದಲ್ಲೂ ಇದೇ ನಿಲುವು ಇದೆ. ಆದರೆ, ಇಂದು ತಾಳಮದ್ದಳೆಯ ದುರ್ಯೋಧನ ಈ ವಾದವನ್ನು ಪ್ರಧಾನ ವಿಷಯವಾಗಿ ಮಂಡಿಸುವುದಕ್ಕೆ ಅರ್ಥದಾರಿಯ ಒಲವೂ ಇಲ್ಲ; ಪ್ರೇಕ್ಷಕರದೂ ಇಲ್ಲ. ಕಾರಣ- ಪುರಾಣ ಪಾತ್ರಗಳೇ ಕಾಲಪ್ರಭಾವದಿಂದ ಹೆಚ್ಚು 'ಲಿಬರಲ್' ಆಗಿ, ಹೆಚ್ಚು ಜಾಣ ರಾಗಿ ರೂಪುಗೊಳ್ಳುತ್ತ ಹೋಗುತ್ತವೆ. ಬಹುಶಃ ಇದರ ಫಲವಾಗಿಯೇ ಪ್ರತಿನಾಯಕ ಪಾತ್ರಗಳೇ ನಾಯಕ ಪಾತ್ರವೆಂಬಂತೆ ರೂಪಿತವಾದ ಪ್ರಸಂಗಗಳ ರಚನೆಯು ಆಗುತ್ತಲಿದೆ.

ಈ ಹಂತದಲ್ಲಿ ಪ್ರಚಲಿತವಾಗಿರುವ ಪ್ರಸಂಗಗಳಿಗಿಂತ ವ್ಯಾಪಕವಾದ ಜೀವನದರ್ಶನವನ್ನು ಮೂಡಿಸುವ ಸವಾಲು ಕಲಾವಿದನ ಮುಂದಿದೆ. ಬಳಕೆಯ ಪ್ರಸಂಗಗಳಲ್ಲಿ. ಬಹುಪಾಲು- ಕುಮಾರವ್ಯಾಸ, ಲಕ್ಷ್ಮೀಶ, ತುರಂಗ ಭಾರತ, ಕನ್ನಡ ಭಾಗವತ- ಇಂತಹವುಗಳನ್ನು ಆಧರಿಸಿರು ವಂತಹವು. ಮೂಲ ಕಾವ್ಯಗಳ ಸಂಕೀರ್ಣತೆ ಕನ್ನಡ ಕಾವ್ಯಗಳಿಗಿಲ್ಲ; ಪ್ರಸಂಗಗಳಿಗೆ ಎಂತೂ ಇಲ್ಲ. ಇದನ್ನೆಲ್ಲ ಮೀರಿ ಅರ್ಥದಾರಿ ಸ್ವಂತಿಕೆಯ ಬಲದಿಂದ ವ್ಯಾಪಕ ಮಾಹಿತಿ ನೀಡುತ್ತಾನೆ ನಿಜ. ಆದರೂ ಮೂಲ ಕಾವ್ಯಗಳನ್ನೇ ಆಧರಿಸಿ ಪ್ರಸಂಗ ರಚನೆ ಆದರೆ, ಇನ್ನಷ್ಟು ಸೂಕ್ಷ್ಮಗಳತ್ತ ಯತ್ನಿಸಲು ಶಕ್ಯವಿದೆ.

ಆದರೂ ತಾಳಮದ್ದಳೆಯಂತಹ ಕಲೆ ಪ್ರಧಾನವಾಗಿ ರಸಾಭಿವ್ಯಕ್ತಿಗೆ ಸಂಬಂಧಿಸಿದ ಕಲೆಯೇ ಹೊರತು, ಸಮಕಾಲೀನ ಕಲಾಮಾಧ್ಯಮದಂತೆ