ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ / ೪೫

ಹೇಳಿದ್ದಾನೆಯೆ ಎಂಬುದು ಪ್ರಶ್ನೆಯಲ್ಲ. ರಾವಣನಿಗೆ ಇರುವ ಸ್ವಭಾವ, ಅವನ ದರ್ಪ, ಅಲಕ್ಷ್ಯ- ಇವುಗಳಿಗೆ ಸರಿಯಾಗಿ ಅವನು ಹಾಗೆ ಹೇಳುವುದು ಅಸಂಭವವಲ್ಲ.

ಇನ್ನೊಂದು ಸಂದರ್ಭ, ಶ್ರೀಕೃಷ್ಣಸಂಧಾನ ಪ್ರದರ್ಶನದ್ದು. ಕೃಷ್ಣನು, ದುರ್ಯೋಧನನ ಮುಂದೆ ಪಾಂಡವರ ನಿಲುಮೆಯನ್ನು ಮಂಡಿಸುವಾಗ (ಈ ಲೇಖಕನೇ ಕೃಷ್ಣ ಪಾತ್ರಧಾರಿಯಾಗಿದ್ದನು.), ಕೌರವರ ಅಪರಾಧಗಳನ್ನು ಪಾಂಡವರು ಕ್ಷಮಿಸಿ, ಉದಾರವಾಗಿ ನಡೆದುಕೊಳ್ಳುವುದು ಎಂದು ಹೇಳುವುದರ ಜೊತೆಗೆ, “ಪಾಂಡವರಿಂದ ನಿಮಗೇನಾದರೂ ಅಪಚಾರ, ನೋವು ಆಗಿದ್ದರೆ ನೀವು ಕೂಡ ಅದನ್ನು ಉದಾರವಾಗಿ, ವಿಶಾಲದೃಷ್ಟಿಯಿಂದ ಕ್ಷಮಿಸಿ, ಸೋದರಭಾವದಿಂದ ಮರೆತು, ಸಂಧಿ ಮಾಡಬೇಕೆಂದು ವಿನಂತಿಸುತ್ತೇನೆ" ಎಂದು ಹೇಳಿದ ವ್ಯಾಸಭಾರತ, ಕುಮಾರವ್ಯಾಸಭಾರತ, ಪ್ರಸಂಗ- ಎಲ್ಲೂ ಕೃಷ್ಣನು ಇಷ್ಟು ತಗ್ಗಿ ನಡೆಯುವುದಿಲ್ಲ ನಿಜ. ಆದರೆ, ಸುಸಂಸ್ಕೃತ ಮನೋಧರ್ಮ, ಹೊಂದಾಣಿಕೆಯ ದೃಷ್ಟಿ, ಕಲಹವಿಲ್ಲದ ವಿವಾದಗಳನ್ನು ರಾಜಿಯಿಂದ ಮುಗಿಸುವ ಅಪೇಕ್ಷೆಗಳುಳ್ಳ ಪಾಂಡವರ ಮತ್ತು ಕೃಷ್ಣನ ಪಾತ್ರಗಳ ಚಿತ್ರಣಕ್ಕೆ, ಮೇಲೆ ಹೇಳಿದ ಮಾತುಗಳು ಪೂರಕವೇ ಹೊರತು ದೋಷ ವೆನಿಸಲಾರವು.

ಇಂತಹ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಒಂದು ಚಿಕ್ಕ ಸಂದರ್ಭವನ್ನು ಇಟ್ಟುಕೊಂಡು, ಪಾತ್ರಧಾರಿಗಳು ಆಡುವ ಮಾತು ಗಳು ಒಂದು ಕಾವ್ಯದಂತೆ, ನಾಟಕದಂತೆ- ಪುರಾಣ ಆಧರಿತವಾಗಿದ್ದೂ, ಸ್ವತಂತ್ರ ರಚನೆಗಳೇ ಆಗಿರುತ್ತವೆ. ಅಲ್ಲದೆ ಅವು ಹಲವು ಕೃತಿಕರ್ತರ (ಅಂದರೆ ಮಾತುಗಾರರ) ಸಂಯುಕ್ತ ರಚನೆಯಾಗಿದ್ದು, ಕಥೆಯನ್ನೂ; ವಸ್ತುವನ್ನೂ ಎಷ್ಟೆಷ್ಟೋ ವಿನ್ಯಾಸಗಳಲ್ಲಿ ಬೆಳೆಸುತ್ತವೆ. ಪ್ರಸಂಗಪಾಠವೂ ಒಂದೇ ಆಗಿದ್ದರೂ, ಅದರ ತಾಳಮದ್ದಳೆ ಪ್ರದರ್ಶನಗಳ ಶಾಬ್ದಿಕ ಅಭಿನಯಾತ್ಮಕ ರೂಪಗಳು ವಸ್ತುಶಃ ಅಸಂಖ್ಯವಾಗಿವೆ.


ಪ್ರಸಂಗವೊಂದರ ಪದ್ಯವು, ಕತೆಯ ನಡೆಯನ್ನು ನಿರ್ದೇಶಿಸುವ ಮತ್ತು ಪಾತ್ರಧಾರಿಯ ಮಾತಿಗೆ ವಸ್ತು, ಪ್ರೇರಣೆಗಳನ್ನು ನೀಡುವ ಕೆಲಸವನ್ನು ಮಾಡುತ್ತದೆ. ತೀರ ಸರಳವಾದ ಕಥನರೂಪದಲ್ಲಿರುವ