ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬ / ವಾಗರ್ಥ

ಒಂದು ಹಾಡು, ಹೇಗೆ ವಿಸ್ತಾರವಾದ ಪಾತ್ರಚಿತ್ರಣಕ್ಕೆ, ಸಂಕೀರ್ಣವಾದ ನಾಟಕ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ರೀತಿಗೆ ಒಂದೆರಡು ಉದಾ ಹರಣೆಗಳನ್ನು ನೋಡಬಹುದು. ಕರ್ಣಪರ್ವ ಪ್ರಸಂಗ (ಕವಿ : ಗೆರೆಸೊಪ್ಪೆ ಶಾಂತಪ್ಪಯ್ಯ), ಈ ಪದ್ಯವನ್ನು ಕರ್ಣಪರ್ವದ ಉತ್ತರಾರ್ಧ ದಲ್ಲಿ ಕರ್ಣನ ಪ್ರವೇಶದ ಪದ್ಯವಾಗಿ ತೆಗೆದುಕೊಳ್ಳುವುದು ಸಂಪ್ರದಾಯ.

ಏನನೆಂಬೆನು ಕರ್ಣತನಯನ | ಹಾನಿಯನ್ನು ಕಾಣುತ್ತ ಕೌರವ | ಸೇನೆ
ತಲೆಕೆಳಗಾಯ್ತು ಕುರುಪತಿ ದುಗುಡಮನನಾದ ||
ಈ ನೆರೆದ ಪರಿಭವವ ಕಾಣುತ | ತಾನೆ ರೋಷಾವೇಷದಿಂದಲಿ |
ಆ ನರನ ಸಮ್ಮುಖಕೆ ರಥವನು ಚಾಚಿದನು ಕರ್ಣ ||


ತನ್ನ ಮಗನಾದ ವೃಷಸೇನನ ಮರಣದಿಂದ ನೊಂದ ಕರ್ಣನು ಅರ್ಜುನನ ಮುಂದೆ ರಥವನ್ನು ಚಾಚಿದನೆಂದು ತಿಳಿಸುವ ಈ ಪದ್ಯದಲ್ಲಿ ಕಾವ್ಯದೃಷ್ಟಿಯಿಂದ ವಿಶೇಷವೇನೂ ಇಲ್ಲ. ಆದರೆ, ಇಲ್ಲಿ ಕರ್ಣನ ಪಾತ್ರದ ಅರ್ಥದಾರಿ ತನ್ನ ಮಗನನ್ನು ಕೌರವನಿಗಾಗಿ ಬಲಿಗೊಡುವಲ್ಲಿ ತನಗೆ ಬಂದ ಕೃತಕೃತ್ಯತೆ, ಜೊತೆಗೆ ಪುತ್ರಶೋಕದ ದ್ವಂದ್ವ, 'ಕುರುಪತಿ ದುಗುಡಮನನಾದು'ದಕ್ಕೆ ತನಗಾದ ವ್ಯಥೆ, ಕರ್ಣ-ಕೌರವ ಸಂಬಂಧ, ತನಗಾದ 'ಪರಿಭವ' ಬದುಕಿನ ಸೋಲು- ಯುದ್ಧದ ಸೋಲು ಆಗ ದುಃಖಕ್ಕೆ ಬದಲಾಗಿ ಬರುವ ರೋಷ, ನರನ ಸಮ್ಮುಖಕೆ ರಥವನು ಚಾಚುವುದು ಎಂದರೆ, ತನ್ನ ಬದುಕೇ ಅರ್ಜುನನಿಗೆ ಪ್ರತಿಸ್ಪರ್ಧಿಯಾಗಿ ಬೆಳೆದ ರೀತಿ, ಜೊತೆಗೇ ಅರ್ಜುನನು ತನ್ನ ಸೋದರನೇ ಆಗಿರುವ ಸತ್ಯ- ಹೀಗೆ ಪದ್ಯದ ಶಬ್ದಗಳನ್ನೆ ಬಳಸಿ, ಅದಕ್ಕೆ ಪಾತ್ರವನ್ನು ಹೊಂದಿಸಿ ಶೋಧಿಸಿದರೆ, ಆಗ ಸಾಮಾನ್ಯವೆನಿಸುವ ಹಾಡಿನೊಳಗೆ ಅದ್ಭುತ ಶಕ್ತಿ ಗೋಚರಿಸಿತು. "ಬಗೆದದ್ದು ತಾರೆ, ಉಳಿದದ್ದು ಆಕಾಶ” ಎಂದು ಕವಿ ಅಡಿಗರು ಹೇಳಿದ ಹಾಗೆ. ಪದ್ಯ-ಅರ್ಥಗಳ ಈ ಬಗೆಯ ಅಭಿವ್ಯಕ್ತಿ ಯನ್ನು ಸಾರ್ಥಕಗೊಳಿಸಲು ಅರ್ಥದಾರಿಗೆ ಕಥೆ, ಪಾತ್ರಗಳ ಅನುಭವದೊಂದಿಗೆ, ತಾಂತ್ರಿಕ ಪರಿಣತಿಯೂ ಮುಖ್ಯವಾಗುತ್ತದೆ.

ಅದೇ ಪ್ರಸಂಗದ ಇನ್ನೊಂದು ಪದ್ಯ. ಸಂದರ್ಭ, ಅರ್ಜುನನು ಕರ್ಣನನ್ನು ಜರೆಯುವ ಸನ್ನಿವೇಶ :

ಎಲವೊ ಸೂತನ ಮಗನೆ | ನೀ | ಕಲಹದೊಳತಿ ಸಹಸಿಗನೆ |
ತಲೆಯನು ನೀಗಲಿಕಹುದು | ಮಾ | ರ್ಮಲೆತರೆ ಕಾಣಲುಬಹುದು ||