ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆ : ಆಕರ - ಪಠ್ಯ - ನಿರ್ವಹಣೆ



ಯಕ್ಷಗಾನ ರಂಗಭೂಮಿಯ ಮಾತಿನ ವಿಭಾಗವಾದ ಅರ್ಥಗಾರಿಕೆ ಎಂಬುದು ಒಂದು ಬಗೆಯ ನಾಟಕ ಸಾಹಿತ್ಯ, ಪ್ರದರ್ಶನದ ಸ್ಥೂಲ ಚೌಕಟ್ಟಾಗಿರುವ ಯಕ್ಷಗಾನ ಪ್ರಸಂಗವೆಂಬ ಗೀತ ಪ್ರಬಂಧದ ಹಾಡು ಗಳು ಮತ್ತು ಒಟ್ಟು ಕಥಾಸಂದರ್ಭ- ಇವು ಅರ್ಥಗಾರಿಕೆಯ ಅಡಿಪಾಯ ಗಳು. ಇನ್ನಿತರ ಹಲವು ಅಂಶಗಳನ್ನು, ಪ್ರೇರಣೆಗಳನ್ನು ಕೂಡಿಸಿಕೊಂಡು ಒಂದು 'ಅರ್ಥ' ರೂಪತಳೆಯುತ್ತದೆ. ಈ ಪ್ರಕಾರ ಆಶುಭಾಷಣ ಪದ್ಧತಿ ಯಿಂದ ಅಲ್ಲ, ಸದ್ಯೋಜಾತವಾಗಿ ತಯಾರಾಗುವಂತಹದು. ಇದು ಹಲವು ನಾಟಕಕಾರರು ಸೇರಿ ಸೃಜಿಸುವ ನಾಟಕದಂತಿದೆ. ಈ ಪ್ರಕಾರವು ತುಂಬ ಪ್ರೌಢವಾಗಿ ಬೆಳೆದಿದ್ದು ಕನ್ನಡದ ವಿಶಿಷ್ಟ ಸೃಜನ ಸಿದ್ಧಿಗಳ ಜತೆ ನಿಲ್ಲಲು ಅರ್ಹವಾಗಿದೆ.
ಅರ್ಥಗಾರಿಕೆ ಹೇಗೆ ರೂಪುಗೊಳ್ಳುತ್ತದೆ? ಎಂಬ ಪ್ರಶ್ನೆಗೆ - ಒಂದು ಪೌರಾಣಿಕ ಕಾದಂಬರಿಯಂತೆ ಅಥವಾ ಪೌರಾಣಿಕ ನಾಟಕದಂತೆ ಎಂದು ಸರಳೀಕರಿಸಿ ಹೇಳಬಹುದು. ಆದರೆ ಅಷ್ಟೆ ಅಲ್ಲ, ವ್ಯತ್ಯಾಸಗಳೂ ತುಂಬ ಇವೆ. ಕಾದಂಬರಿಕಾರನ ಸ್ವಾತಂತ್ರ್ಯ ಅರ್ಥಗಾರಿಕೆಗೆ ಇಲ್ಲ. ಬೇರೆ ಕೆಲವು ಅನುಕೂಲಗಳೂ ಇವೆ. ಪ್ರದರ್ಶನದಲ್ಲೇ ಹಿಮ್ಮೇಳ, ಸಹಪಾತ್ರಗಳಿಂದ ಸಿಗುವ ಪ್ರೇರಣೆಗಳಿವೆ. ಅದು ರಂಗದಲ್ಲೇ ಸೃಷ್ಟಿಯಾಗುವುದರಿಂದಲೂ, ಮೌಖಿಕ ರಚನೆಯಾದುದರಿಂದಲೂ, ಸಹಜವಾಗಿ ಕೆಲವು ಪ್ರಾಬಲ್ಯ ಗಳೂ, ತೊಡಕುಗಳೂ ಅದಕ್ಕಿವೆ. ಹಲವು ಸೆಳೆತಗಳ ಮಧ್ಯೆ ಪಾತ್ರಧಾರಿ ಕೆಲಸ ಮಾಡುತ್ತಿರುತ್ತಾನೆ. ಅವು ಯಾವುವು? ಅರ್ಥಾತ್ ಅರ್ಥದಾರಿಯ ಪ್ರತ್ಯಕ್ಷ ಮತ್ತು ಪರೋಕ್ಷ ಆಧಾರ, ಆಕರ, ಪ್ರೇರಕ ಮೂಲಗಳು ಯಾವುವು? ಅವುಗಳೊಳಗಿನ ಸಂಬಂಧ ಮತ್ತು ಆಕರ ಭಿನ್ನತೆಯ ಸಮಸ್ಯೆಗಳೇನು ಎಂಬುದೆನ್ನು ಸಂಕ್ಷೇಪವಾಗಿ ಪರಿಶೀಲಿಸುವುದು ಈ ಲೇಖನದ ಉದ್ದೇಶ.

ಯಕ್ಷಗಾನ ಪಾತ್ರಧಾರಿಯ ಆಕರಗಳು ಮುಖ್ಯವಾಗಿ ಎರಡು ವಿಧ : ಹಿನ್ನೆಲೆ ಮತ್ತು ಮುನ್ನೆಲೆ ಎಂದು ಇವುಗಳನ್ನು ಹೇಳಬಹುದು.