ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಆಕರ-ಪಠ್ಯ - ನಿರ್ವಹಣೆ / ೭೫

ಹಿನ್ನೆಲೆಯಲ್ಲಿ ಮುಖ್ಯವಾಗಿ ಪ್ರದರ್ಶನಕ್ಕೆ ಆರಿಸಿಕೊಂಡ ಪ್ರಸಂಗವೆಂಬ ಪಠ್ಯವಿದೆ, ಇತರ ಪ್ರಸಂಗಗಳಿವೆ. ಅದಕ್ಕೆ ಆಕರವಾಗಿರುವ ಕನ್ನಡ ಕಾವ್ಯಗಳು, ಜಾನಪದ ಕಥಾನಕ ಯಾ ಕಾಲ್ಪನಿಕ ಕಥಾರೂಪ ಇದೆ. ಅದಕ್ಕೂ ಹಿನ್ನೆಲೆಯಾಗಿ, ಹಲವು ಸಂದರ್ಭಗಳಲ್ಲಿ ಸಂಸ್ಕೃತದ ಪುರಾಣ, ಕಾವ್ಯ, ನಾಟಕ, ಮೊದಲಾದ ಆಕರಗಳಿವೆ. ಇನ್ನೊಂದೆಡೆಯಲ್ಲಿ ಅರ್ಥಗಾರಿಕೆಗೆ ಸಂಬಂಧಿಸಿದ ಒಂದು ಪರಂಪರೆ ಮತ್ತು ಯಕ್ಷಗಾನದ ರಂಗ ಸಂಪ್ರದಾಯಗಳಿವೆ. ಹಾಗೆಯೇ ಯಕ್ಷಗಾನದ ಸಂಗೀತ (ಎಂದರೆ ಭಾಗವತಿಕೆ, ಚಂಡೆ, ಮದ್ದಳೆಗಳು) ಪ್ರಸಂಗಕ್ಕೆ ಒಂದು ಅರ್ಥ ನೀಡುತ್ತವೆ. ಆಟದಲ್ಲಾದರೆ ನೃತ್ಯ, ಚಲನೆಗಳೂ ಇವೆ.

ಮುನ್ನೆಲೆಯಲ್ಲಿ ಪಾತ್ರಧಾರಿಯ ಸ್ವಂತ ಜೋಡಣೆಗಳು, ಅಧ್ಯಯನ ಗಳು, ಕಲ್ಪನೆಗಳು ಒಂದು ಮುಖ್ಯ ಅಂಶ. ಅದರೊಂದಿಗೆ, ಇಲ್ಲಿ ಪಾತ್ರಧಾರಿ ತುಂಬ ಪರಾಧೀನನೂ ಹೌದು. ಸಹಕಲಾವಿದನ ಮಾತು, ಅಭಿನಯಗಳು ಅವನ ಮಾತುಗಾರಿಕೆಯನ್ನು ರೂಪಿಸುತ್ತವೆ, ನಿಯಂತ್ರಿಸು ತ್ತವೆ. ಎಷ್ಟೋ ಬಾರಿ ಅದೇ ಮುಖ್ಯ ಪ್ರೇರಣೆಯಾಗುತ್ತದೆ. ಪ್ರದರ್ಶನ ನಡೆಯುವ ಪ್ರದೇಶ, ಪ್ರದರ್ಶನದ ಕಾಲಾವಧಿ ಮತ್ತು ಪ್ರೇಕ್ಷಕ ಸಮುದಾಯದ ಸ್ವರೂಪ ಮತ್ತು ಅವರ ಪ್ರತಿಕ್ರಿಯೆಗಳೂ ಮಾತಿನ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ. ಈ ಎಲ್ಲದಕ್ಕೆ,ಸ್ಥೂಲವಾದ ಹೊರ ಚೌಕಟ್ಟಾಗಿ, ಯಕ್ಷಗಾನ ಕಲೆಯ ಸ್ವರೂಪ, ಕನ್ನಡ ಭಾಷೆ- ಸಂಸ್ಕೃತಿ, ಅದರೊಳಗಿನ ಕರಾವಳಿ, ಮಲೆನಾಡಿನ ಜೀವನಸ್ವರೂಪ- ಇವು ಆವರಣ ಒದಗಿಸಿ ಅರ್ಥದ ಸ್ವರೂಪವನ್ನು ರೂಪಿಸುತ್ತವೆ. ಹೀಗೆ, ವಿವಿಧ ಪ್ರೇರಣೆಗಳನ್ನು ಸ್ವೀಕರಿಸಿ ಅವುಗಳ ಮಧ್ಯೆ ಸಮತೋಲನವನ್ನು ಸಾಧಿಸುವಲ್ಲಿ ಯಾವ ಅಂಶಗಳನ್ನು ಎಷ್ಟು ಪ್ರಮಾಣದಲ್ಲಿ, ಹೇಗೆ ಸ್ವೀಕರಿಸಿ ಅಳವಡಿಸಬೇಕು ಎಂಬ ಬಗ್ಗೆ ಸ್ಥೂಲವಾಗಿ, ಔಚಿತ್ಯದ ನೆಲೆ ಯಲ್ಲಿ ಹೇಳಬಹುದಾದರೂ, ಅದರ ಖಚಿತ ಪ್ರಮಾಣವನ್ನು ಕಲಾವಿದನ ಪ್ರಜ್ಞೆ ಮತ್ತು ಸಂದರ್ಭಗಳು ನಿರ್ಧರಿಸುತ್ತವೆ.

ಪ್ರದರ್ಶನದ ನಡೆ ಮತ್ತು ಪಾತ್ರಗಳ ಅಭಿವ್ಯಕ್ತಿಗಳು, ಆ ಪಾತ್ರ ಗಳಿಂದ ಮಾತ್ರವಲ್ಲ, ಬೇರೆ ಪಾತ್ರಗಳಿಂದಲೂ ಆಗುತ್ತ ಇರುತ್ತವೆ. ಉದಾಹರಣೆಗೆ ಸುಭದ್ರಾ ಕಲ್ಯಾಣದ ಕೃಷ್ಣ-ಬಲರಾಮರ ಪಾತ್ರಗಳನ್ನು