ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨ / ವಾಗರ್ಥ

ವಾಲಿವಧೆಯಲ್ಲಿ, ವಾಲಿಯು ರಾಮನನ್ನು ನಿಂದಿಸುವಾಗ 'ರಾಮನ ಪೂರ್ವಜೀವನದ ಘಟನೆಗಳನ್ನು ಪ್ರಸ್ತಾಪಿಸಿ, ಅದಕ್ಕೆ ಹೀನಾರ್ಥವನ್ನು ಕಲ್ಪಿಸಿ ಹೇಳುವಾಗ, ಅದೆಲ್ಲ ವಾಲಿಗೆ ತಿಳಿದದ್ದು ಹೇಗೆ? ಎಂಬ ಪ್ರಶ್ನೆ ಅಪ್ರಸ್ತುತ. ತಾರೆಯು ವಾಲಿಗೆ ಹೇಳಿದ ಸಂಕ್ಷೇಪವಾದ ರಾಮ ವೃತ್ತಾಂತ ದಲ್ಲಿ ವಿವರಗಳಿಲ್ಲದಿದ್ದರೂ, ವಾಲಿಯು ವಿವರಗಳನ್ನು ಹೇಳಬಹುದು. ಅದರಿಂದ ವಾಲಿಯ ಪಾತ್ರಚಿತ್ರಣ, ಕಲಾತ್ಮಕತೆಗಳಿಗೆ ಏನು ಪ್ರಯೋಜನ ಸಿಕ್ಕಿತು ಎಂಬುದು ಮುಖ್ಯ ವಿಚಾರ.

ಹಾಗೆ ನೋಡಿದರೆ, ರಾಮಾಯಣದಲ್ಲಿ, ರಾಮನ ಜೀವನ ವೃತ್ತಾಂತವು ರಾವಣ, ವಿಭೀಷಣಾದಿಗಳಿಗೆ ಹೇಗೆ ತಿಳಿಯಿತು? ಅವರು ಅದನ್ನು ವಿವರವಾಗಿ ಚರ್ಚಿಸುವುದು ಹೇಗೆ? ಎಂಬ ಪ್ರಶ್ನೆಯೂ ಬರುತ್ತದೆ. ವಾಲ್ಮೀಕಿ ರಾಮಾಯಣವನ್ನು ಪರಿಶೀಲಿಸಿದರೆ, ಪಂಚವಟಿ ಯಲ್ಲಿ ಶೂರ್ಪನಖಾ ಪ್ರಕರಣದಲ್ಲಿ ನಿಜವಾಗಿ ನಡೆದುದೇನು ಎಂಬುದು ರಾವಣನಿಗೆ ಕೊನೆಯವರೆಗೂ ಗೊತ್ತಿರಲಿಲ್ಲ ಎಂದೇ ಕಾಣುತ್ತದೆ. (ಅವನಿಗೆ ರಾಮನ ಬಗೆಗೆ ಹೇಳಿದ ಮಾರೀಚ, ಅಕಂಪನ, ಶೂರ್ಪನಖಿ ಯರ ಮಾತಿನಲ್ಲೂ ರಾಮ-ಶೂರ್ಪನಖಾ ಸಂವಾದದ ಪ್ರಸ್ತಾಪವಿಲ್ಲ) ಆದರೂ, ಯಕ್ಷಗಾನದ ರಾವಣ-ವಿಭೀಷಣರು ಅಲ್ಲಿನ ವಿವರಗಳನ್ನು ಪ್ರಸ್ತಾಪಿಸುವುದುಂಟು, ಚರ್ಚಿಸುವುದುಂಟು. ಇಲ್ಲಿಯೂ ಪುನಃ ಭಿನ್ನ ಆಕರಗಳಿಂದ ಭಿನ್ನವಿವರಗಳು ಬಂದು ಮತ್ತಷ್ಟು ಜಟಿಲತೆ ಬರುವು ದುಂಟು. ಇಲ್ಲಿ ಕಲಾವಿದರೊಳಗಿನ ಒಪ್ಪಂದವು ಮುಖ್ಯ. ವಿವರಗಳು ಗೊತ್ತಿಲ್ಲದ ಸ್ಥಿತಿಯನ್ನೆ ಇಟ್ಟುಕೊಂಡು ಕೂಡ ಸಂವಾದ ನಡೆಸಬಹುದು. ಅಥವಾ ಗೊತ್ತಿದೆ ಎಂಬಂತೆಯೂ ನಡೆಸಬಹುದು. ಭಿನ್ನ ಭಿನ್ನ ಆಕರಗಳನ್ನು ತಂದಾಗ, ಉದಾ: ಪಾರ್ತಿಸುಬ್ಬನ ಪ್ರಸಂಗದ ಕಥಾರೂಪ ಅಥವಾ ವಾಲ್ಮೀಕಿ ರಾಮಾಯಣದ ಕಥಾರೂಪ ಬಂದಾಗ, “ಆಗಲಿ, ನೀನು ಕೇಳಿದಂತೆ ನಡೆದದ್ದೇನು? ಹೇಗೆ?' ಎಂದು ಪ್ರಶ್ನಿಸಿ, ಅದನ್ನು ಒಪ್ಪಿಕೊಂಡು, ಸಂವಾದಿಸಬಹುದು.

ಮಹಾಭಾರತದಲ್ಲಿ, ಶ್ರೀಕೃಷ್ಣ ಸಂಧಾನಕ್ಕೆ ಸಂಬಂಧಿಸಿ ಇಂತಹದೇ ಒಂದು ವಿಷಯವನ್ನು ಉದಾಹರಿಸಬಹುದು. ಕೃಷ್ಣನು ಯುದ್ಧದ ಪರವಾಗಿಯೇ ಇದ್ದನೆಂದೂ, ಸಂಧಾನ ಪ್ರಯತ್ನ ವ್ಯರ್ಥವೆಂದು ಭಾವಿಸಿದ್ದನೆಂದೂ ಕುಮಾರವ್ಯಾಸ, ಯಕ್ಷಗಾನ ಪ್ರಸಂಗಗಳಲ್ಲಿ ಕಾಣು ತ್ತದೆ. ಯುದ್ಧ ಮಾಡಿಸಿ ಕೌರವರನ್ನು ಕೊಲ್ಲಿಸುವುದಾಗಿ ದ್ರೌಪದಿಗೆ