ಮಾತು ಕೊಟ್ಟಂತೆಯೂ ಇದೆ. ಇದು ದುರ್ಯೋನನಿಗೆ ತಿಳಿದಿತ್ತೆ? ಎಂಬುದು ಗೊತ್ತಾಗುವುದಿಲ್ಲ. ತಿಳಿದಿತ್ತು ಎಂದು ಗ್ರಹಿಸಿ ಕೌರವನು ಪಾಂಡವರ ಪರವಾದ ಕೃಷ್ಣನ ಸಂಧಾನವು ಒಂದು ಸೋಗು ಮಾತ್ರ ಎಂದು ಹೇಳುವ ಅರ್ಥಗಾರಿಕೆಯ ಪರಂಪರೆಯೊಂದಿದೆ. ಅದೂ ಒಂದು ದಾರಿ. ಇದಕ್ಕೆ ಪ್ರತಿಯಾಗಿ, ತಾನು ಯುದ್ಧವನ್ನು ಬೆಂಬಲಿಸಿದ್ದಾಗಲಿ, ಮಾತುಕೊಟ್ಟುದಾಗಲಿ ಸಾಂದರ್ಭಿಕವೆಂದೂ ವೈರವು ಅಳಿದು ಶಾಂತಿ ನೆಲೆಸುವುದಾದರೆ, ಅದು ತನಗೆ ಸಮ್ಮತವೆಂದೂ ಕೃಷ್ಣನ ಪಾತ್ರಧಾರಿ ಪ್ರತಿಪಾದಿಸಬಹುದು.
ಎಲ್ಲ ಪಾತ್ರಗಳಿಗೂ ಹಿಂದಿನ ಘಟನೆಗಳು ಸಾಮಾನ್ಯವಾಗಿ ತಿಳಿದಿವೆ ಎಂಬ ಗೃಹೀತಕ್ಕೂ ಅಪವಾದಗಳಿವೆ. ಒಂದು ಪಾತ್ರಕ್ಕೆ ಒಂದು ವಿಚಾರ ಗೊತ್ತಿಲ್ಲ ಎಂಬುದೇ ಕತೆಗೆ ಮುಖ್ಯವಾದರೆ ಅದನ್ನು ತಪ್ಪದೆ ಪಾಲಿಸ ಬೇಕು ಉದಾ: ಕಾಕಾಸುರ ವೃತ್ತಾಂತ. ಇದು ರಾಮ ಸೀತೆಯರಿಗೆ ಮಾತ್ರ ತಿಳಿದ ಗುಟ್ಟು, ಹನುಮಂತನು ತಾನು ರಾಮದೂತನೆಂದು ಸೀತೆಯನ್ನು ನಂಬಿಸಲು ಇದನ್ನು ಹೇಳುತ್ತಾನೆ. ಇದನ್ನು ಬೇರೆ ಎಲ್ಲೂ ಯಾವ ಪಾತ್ರವೂ ಪ್ರಸ್ತಾಪಿಸಕೂಡದು. ವಾಲಿ ಸುಗ್ರೀವರು ಏಕರೂಪವಾಗಿದ್ದುದ ರಿಂದ, ತನಗೆ ಗೊಂದಲವುಂಟಾಗಿ ತಾನು ಬಾಣಪ್ರಯೋಗ ಮಾಡಲಿಲ್ಲ ಎಂದು ರಾಮನು ಸುಗ್ರೀವನಿಗೆ ಸಮಾಧಾನ ಹೇಳುತ್ತಾನೆ. (ವಾಲಿ ಸುಗ್ರೀವರ ಪ್ರಥಮ ಯುದ್ಧದ ಅನಂತಠ). ಇದು ಸನ್ನಿವೇಶದ ಕೇಂದ್ರ ವಿಚಾರ, ರಹಸ್ಯ. ಇದನ್ನು ಪಾಲಿಸಬೇಕಾದುದು. ಅನುಲ್ಲಂಘನೀಯ ನಿಯಮ.
ಆಕರಗಳೊಳಗೆ ವ್ಯತ್ಯಾಸ ಇರುವಂತೆ, ವ್ಯತ್ಯಾಸದಲ್ಲಿ ಪ್ರಾಶಸ್ತ್ರ ಮತ್ತು ಆಯ್ಕೆಯ ಪ್ರಶ್ನೆಯೂ ಇದೆ. ಇದನ್ನು ಎರಡು ರೀತಿಗಳಲ್ಲಿ ಪರಿಶೀಲಿಸಬಹುದು. ಒಂದು ಪೂರ್ವಕತೆಯನ್ನು ಅರ್ಥಗಾರಿಕೆಯಲ್ಲಿ ಅದರ ಬಳಕೆಯ ಕ್ರಮ; ಮತ್ತೊಂದು ಪ್ರಸಂಗ ರಚನೆಯಲ್ಲಿ ಅದು ಸೇರಿಕೊಳ್ಳುವ ವಿಧಾನದ ಪರಿಣಾಮ.
ಒಂದು ಕತೆ ಸಾಗುತ್ತಿರುವಾಗ, ಪ್ರಸಂಗದ ಪದ್ಯಗಳ ಆಧಾರದಲ್ಲಿ ಕತೆಯ ರೇಖೆ ಹೋಗುತ್ತಿರುತ್ತದೆ. ಅದಕ್ಕೆ ಹಿಂದಿನ, ತುಸು ಹಿಂದಿನ, ಸನ್ನಿವೇಶದ ಅಥವಾ ಬಹಳ ಹಿಂದಿನ ಸಂದರ್ಭದ ಉಲ್ಲೇಖವನ್ನು