ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊರಗಿನವರು (ಅವರು ಯಕ್ಷಗಾನದ ಯಾವುದೇ ವಿಭಾಗದ ಕಲಾವಿದನಲ್ಲ). ಜೋಷಿ ಯಕ್ಷಗಾನದ ಒಳಗಿನವರು. ಕಾರಂತರು ಮುಟ್ಟದೆಯಿರುವ ಯಕ್ಷಗಾನದ ವಿಷಯಗಳನ್ನು ಜೋಷಿಯವರು ಮುಟ್ಟಿದ್ದಾರೆ. ಜೋಷಿಯವರು ಬರೆಯದೆ ಇದ್ದದ್ದು ಯಕ್ಷಗಾನದ ತಾಂತ್ರಿಕ ವಿಚಾರಗಳನ್ನು ಮಾತ್ರ ಉದಾಹರಣೆಗೆ ಛಂದಸ್ಸು, ವ್ಯಾಕರಣ, ರಾಗತಾಳಗಳ ವಿಶ್ಲೇಷಣೆ, ಚೆಂಡೆಮದ್ದಳೆಗಳ ಬಡಿತಗಳ ನುಡಿಗಟ್ಟು ಇತ್ಯಾದಿ. ಅವರ ಬರವಣಿಗೆ ಅಕಾಡಮಿಕ್ ಶಿಸ್ತಿನಿಂದ ಕೂಡಿದೆ.

ತಾಳಮದ್ದಳೆಯ ವಿವಿಧ ಮಜಲುಗಳ ಕುರಿತೇ 70%ರಷ್ಟು ಅವರ ಬರೆಹಗಳಿವೆ. ಯಾವುದೇ ವಿವಾದಕ್ಕೂ ಅವರದು ಬಹುರೂಪದ ಪ್ರತಿಕ್ರಿಯೆ. ಆಸಕ್ತರ ಪ್ರಶ್ನೆಗೆ ಅವರದು ಥಟ್ಟನೆ ಉತ್ತರ. ಸೂಕ್ಷ್ಮಗ್ರಾಹಿತ್ವ, ಗಟ್ಟಿ ಅನುಭವ, ಖಚಿತ ನೇರ ಸರಳ ಉತ್ತರ. ಜೋಷಿಯವರೊಬ್ಬ ಹೊಣೆಯರಿತ ಲೇಖಕ, ನುಣುಚಿಕೊಳ್ಳುವ ಉತ್ತರ ಅವರಲ್ಲಿಲ್ಲ. ಪರಂಪರೆ, ಸಂಪ್ರದಾಯಗಳ ಕುರಿತು ಒತ್ತಿ ಹೇಳುವ ಅವರು, ಹದವರಿತು ಅರ್ಥವತ್ತಾದ ಪರಿಷ್ಕಾರ, ವಿರೂಪವಾಗದ ಆಧುನಿಕತೆ ಬೇಕೆನ್ನುತ್ತಾರೆ. ನಿರ್ದಾಕ್ಷಿಣ್ಯ ಖಂಡನೆಗೆ ಹಿಂಜರಿಯದ ಅವರಿಗೆ ತಾನು ಹೇಳಿದಂತೆಯೇ ಆಗಬೇಕೆಂಬ ಹಟಮಾರಿ ಧೋರಣೆ ಯಿಲ್ಲ. ಪ್ರಸಂಗಗಳ ಆಳ ಅಧ್ಯಯನ ಅವರಿಗಿದೆ. ಶಬ್ದಗಳ ಬಳಕೆ ವಿಶಾಲವಾದುದು. ಹೊಸ ಹೊಸ ಶಬ್ದಗಳ ಬಳಕೆ ಅವರ ಲೇಖನದ ಅಂದವನ್ನು ಹೆಚ್ಚಿಸಿದೆ. ಅಗತ್ಯವಿದ್ದಲ್ಲಿ ವಿವರಣೆಗೆ ಚಿತ್ರವನ್ನೂ ಒದಗಿಸಿ ಹೇಳಬೇಕಾದುದನ್ನು ನೇರವಾಗಿ ಓದುಗರಿಗೆ ಮುಟ್ಟಿಸುತ್ತಾರೆ. ಚದರಿಹೋದ ಅವರ ಬಿಡಿ ಬರೆಹಗಳ ಸಂಗ್ರಹವು ಅರ್ಥಗಾರಿಕೆಗೊಂದು ಸಂಹಿತೆಯಾದೀತೆಂದು ಸಾಮಗರ ಅಭಿಪ್ರಾಯ.

ಶಿಕ್ಷಣತಜ್ಞ, ಲೇಖಕ, ನಿವೃತ್ತ ಉಪನ್ಯಾಸಕ ಡಾ। ಚಂದರಶೇಖರ ದಾಮ್ಲಯವರು 'ಜೋಷಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ' ಎಂಬ ಕುರಿತು ಮಾತನಾಡಿದರು. ಡಾ। ಜೋಷಿಯವರ ಕಾಳಜಿ ಕೇವಲ ವಿದ್ವತ್ ಕ್ಷೇತ್ರವಲ್ಲ. ಅವರು ತಮ್ಮ ಹುಟ್ಟೂರು ಮಾಳದ ಪರಿಸರ, ಕುಟುಂಬ, ಕಲಿತ ಶಾಲೆ, ಬಂಧುಮಿತ್ರರ ಬಳಗ, ಒಡನಾಡಿಗಳ ಗೆಳೆತನ ಹೀಗೆ ಎಲ್ಲವನ್ನೂ ಆಗಾಗ ನೆನೆಯುತ್ತಾರೆ. ಅವರ ಸಾಮಾಜಿಕ ಸಂಬಂಧಗಳು ಅರ್ಥಗಾರಿಕೆಯನ್ನು ಸಂಪನ್ನಗೊಳಿಸಿವೆ. ವಿನೋದಪ್ರಿಯ ಸರಸ ಸಂಭಾಷಣೆಯಿಂದ ಅವರು ಎಲ್ಲರಿಗೂ ಆಪ್ತರಾಗುತ್ತಾರೆ. ಮಠಾಧಿಪತಿಗಳಿಂದ ಹಿಡಿದು ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅವರು ನಿಕಟವರ್ತಿ.

ಶೈಕ್ಷಣಿಕ ಕ್ಷೇತ್ರದಲ್ಲೂ ಅವರ ಕೊಡುಗೆ ಸಣ್ಣದಲ್ಲ. ಸೃಜನಶೀಲ ಶಿಕ್ಷಣದತ್ತ ಅವರು ಗಮನಹರಿಸಿದ್ದಾರೆ. ನೆಚ್ಚಿನ ಬೋಧಕನಾಗಿ, ಜವಾಬ್ದಾರಿಯುತ ಪ್ರಾಚಾರ್ಯನಾಗಿ ಅವರು ಗೆದ್ದಿದ್ದಾರೆ. ಅವರ ನಿವೃತ್ತಿಯ ದಿನ ಕಾಲೇಜಿನಲ್ಲಿ ಸಹೋದ್ಯೋಗಿಗಳಿಂದ ಸಿಕ್ಕಿದ ಕಣ್ಣೀರಿನ ವಿದಾಯವೇ ಅವರ ಯಶಸ್ಸಿಗೆ ಸಾಕ್ಷಿ. ಅವರು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಕಸ ಗುಡಿಸುವಲ್ಲಿಂದ ತೊಡಗಿ ಸಭಾ ಕಲಾಪದಲ್ಲಿ ಬೆರೆಯುವವರೆಗೆ ಅಂತರವರಿಯದ ಸೇವೆ ಅವರ ಗುಣ. ಮಂಗಳೂರು ವಿಶ್ವವಿದ್ಯಾಲಯ

ವಾಗರ್ಥ ಗೌರವ / 10