ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಲ್ಲಿ ನಡೆದ ಶೇಣಿ ಸನ್ಮಾನ ಕಾರ್ಯಕ್ರಮದ ನಿರ್ವಹಣೆಯ ಬಲುದೊಡ್ಡ ಪಾಲು ಅವರದು. ಈಗಿನವರಿಗೆ ಅದೊಂದು ಮಾದರಿ.

ಯಕ್ಷಗಾನದ ಅರ್ಥಧಾರಿ, ಶಿಕ್ಷಕ ವೆಂಕಟರಾಮ ಭಟ್ಟ ಸುಳ್ಯ (ಈ ಲೇಖನದ ಕರ್ತೃ) ಇವರು ಪ್ರಭಾಕರ ಜೋಷಿಯವರು ಕೋಪವನ್ನೂ ವಿನೋದವಾಗಿ ಹೊರಹಾಕಬಲ್ಲರು ಎಂಬುದಕ್ಕೊಂದು ಉದಾಹರಣೆಯನ್ನು ಕೊಟ್ಟರು. ಒಂದು ವಿಚಾರ ಸಂಕಿರಣದಲ್ಲಿ ಜೋಷಿಯವರು ಅಧ್ಯಕ್ಷ. ಒಂದು ಗಂಟೆಗೆ ಸಭೆ ಮುಗಿಯುವುದೆಂದು ನಿಗದಿಯಾಗಿತ್ತು. ಒಂದು ಗಂಟೆ ಕಳೆದು ಕೆಲವು ನಿಮಿಷಗಳ ಬಳಿಕ ಜೋಷಿಯವರು ಅಧ್ಯಕ್ಷ ಭಾಷಣಕ್ಕೆ ಎದ್ದು ನಿಂತರು. ಈ ಅಶಿಸ್ತಿಗೆ ಅವರು ರೋಸಿಹೋಗಿದ್ದರು. “ಈಗ ಮಧ್ಯಾಹ್ನದ ಹಸಿವಿನ ಹೊತ್ತು. ನೀವು ನನ್ನ ಭಾಷಣವನ್ನು ಕೇಳುವ ಸ್ಥಿತಿಯಲ್ಲಿಲ್ಲ. ಈಗ ಭಾಷಣ ಮಾಡುವುದು ಅಪರಾಧ. ಆದರೂ ಒಂದೂವರೆಯ ಮೊದಲು ನನ್ನ ಭಾಷಣವನ್ನು ಮುಗಿಸುವುದಿಲ್ಲ.” ಸಭೆಯಲ್ಲಿ ನಗು. ತನ್ನ ಕಾರ್ಯದಿಂದ ಇನ್ನೊಬ್ಬರಿಗೆ ತೊಂದರೆಯಾದೀತೆಂದು ಅವರಿಗೆ ಅನ್ನಿಸಿದರೆ ಆಗಲೂ ಹಾಸ್ಯದಿಂದ ಅದನ್ನು ನಿವಾರಿಸಿಯಾರು. ಒಂದು ದಿನ ರಾತ್ರಿ ಹನ್ನೊಂದೂವರೆಯ ಸುಮಾರಿಗೆ ನಮ್ಮ ಮನೆಯ ಕರೆಗಂಟೆಯನ್ನೊತ್ತಿದರು. ನಾನು ಬಾಗಿಲು ತೆಗೆದಾಗ “ನಿದ್ದೆ ಮಾಡಿದ್ದೀರಾ?” ಎಂದು ಕೇಳಿದರು. “ಇಲ್ಲ. ಈಗ ಮಲಗಿದ್ದೆನಷ್ಟೆ. ನಿದ್ದೆ ಬಂದಿರಲಿಲ್ಲ.” ಎಂದದ್ದಕ್ಕೆ, “ಹೌದಾ? ಹಾಗಾದರೆ ಇನ್ನರ್ಧ ಗಂಟೆ ಕಳೆದು ಬರುತ್ತಿದ್ದೆ.” ಎಂದರು.

ಜೋಷಿಯವರು ಯಾವ ವಿಚಾರವನ್ನಾದರೂ ಒಂದೇ ಮಗ್ಗುಲಿನಿಂದ ನೋಡುವವರಲ್ಲ. ಒಳ್ಳೆಯ ವಿಚಾರದ ಕೆಟ್ಟ ಮುಖಗಳನ್ನೂ, ಕೆಟ್ಟ ವಿಚಾರದ ಒಳ್ಳೆಯ ಮುಖಗಳನ್ನೂ ನಿರ್ಲಿಪ್ತವಾಗಿ ನೋಡಬಲ್ಲರು. ಎಷ್ಟೇ ಕೆಟ್ಟ ಕಲಾವಿದನಾದರೂ ಅವರಿಗೆ ಅಲ್ಲೊಂದು ಒಳ್ಳೆಯ ಅಂಶ ಕಾಣಸಿಗುತ್ತದೆ. ದೊಡ್ಡ ಕಲಾವಿದರ ದೌರ್ಬಲ್ಯಗಳೂ ಅವರಿಗೆ ತಿಳಿದಿದೆ. ಕಲಾವಿದನಾಗಿ ಅವರದು ಕಣ್ಣಿಗೆ ಕಟ್ಟುವ ಪಾತ್ರಚಿತ್ರಣವಲ್ಲ. ಆದರೂ ತೀಕ್ಷ್ಮವಾದ ವೈಚಾರಿಕತೆ, ಪಾತ್ರದ ಒಳನೋಟ, ಹಾಸ್ಯಮಯ ಅಭಿವ್ಯಕ್ತಿಯಿಂದ ಅವರು ಎಲ್ಲರನ್ನೂ ಸೆಳೆಯುತ್ತಾರೆ. ಮತ್ತೆ ಮತ್ತೆ ಬೇಕೆನಿಸುತ್ತಾರೆ. ಅವರ ಭಾಷಾ ಜ್ಞಾನದ ಹರಹೂ ದೊಡ್ಡದೆ. ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ ಮುಂತಾದ ಭಾಷೆಗಳಲ್ಲದೆ ಉಪಭಾಷೆಗಳಾದ ಹವ್ಯಕ, ಶಿವಳ್ಳಿ, ಚಿತ್ಪಾವನಿ ಮೊದಲಾದ ಉಪಭಾಷೆಗಳಲ್ಲೂ ನಿರಾಯಾಸವಾಗಿ ವ್ಯವಹರಿಸಬಲ್ಲರು. ಅವುಗಳ ಒಂದೊಂದು ಶಬ್ದ, ಅವುಗಳ ವ್ಯುತ್ಪತ್ತಿ, ಬೇರೆ ಭಾಷೆಗಳಲ್ಲಿ ಅವುಗಳಿಗೆ ಸಂವಾದಿ ಶಬ್ದಗಳು, ಅವುಗಳ ಹುಟ್ಟಿದ ಬಗೆ ಇತ್ಯಾದಿ ಎಲ್ಲವೂ ಅವರ ಚಿಂತನೆಗೆ ವಸ್ತುಗಳೆ, ಅವರು ಶೀಘ್ರಕೋಪಿ ಗಳಾದರೂ ದೀರ್ಘಕೋಪಿಗಳಲ್ಲ. ಹಿರಿಯರಾದ ಶೇಣಿಯವರಿಂದ ಹಿಡಿದು ಹಲವು ಹಿರಿಕಿರಿಯರ ಜೊತೆಗೂ ಜಗಳವಾಡಿದ್ದಾರೆ. ಆದರೆ ಯಾರೊಂದಿಗೂ ಮುನಿಸು ಇರಿಸಿಕೊಂಡವರಲ್ಲವೆಂದು ಜೋಷಿಯವರ ಒಳಹೊರಗುಗಳನ್ನು ತೆರೆದಿಟ್ಟರು.

ಅರ್ಥಧಾರಿ, ಲೇಖಕ, ಉಪನ್ಯಾಸಕ ರಾಧಾಕೃಷ್ಣ ಕಲ್ಟಾರ್ 'ಜೋಷಿಯವರ

ವಾಗರ್ಥ ಗೌರವ / 11