ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
೯೮
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
 

ನಲಕೂಬರನು ಕೊಟ್ಟ ಘೋರಶಾಪಗಳು, ವೇದವತಿಯು ಮಾಡಿದ ಘೋರ ಪ್ರತಿಜ್ಞೆ ಇವೆಲ್ಲವುಗಳಿಂದ ರಾವಣನು ಮಿಸುಕಾಡ ದಂತಾಯಿತು. ಈ ಕಾರಣದಿಂದ ಹತ್ತಿರದ ಸೀತೆಯನ್ನು ದೂರವಿರಿಸಬೇಕಾಯಿತು; ಅವನಿಗೆ ಲಭಿಸುವಂತಿರಲಿಲ್ಲ; ಸೀತೆಯು ದುರ್ಲಭಳಾದಳು. ತನ್ನ ತಪೋಬಲವು ಉಡುಗಬಾರದೆಂದು ವೇದವತಿಯು ರಾವಣನಿಗೆ ಶಾಪವನ್ನು ಕೊಡಲಿಲ್ಲ; ಆದರೆ, ಅವಳು ಉಚ್ಚರಿಸಿದ ಪ್ರತಿಜ್ಞೆಯು ಶಾಪಕ್ಕಿಂತ ತೀಕ್ಷ್ಣವಾಗಿದೆ. ವೇದವತಿಯು ಓರ್ವ ತಪಸ್ವಿನಿಯಾಗಿದ್ದಳು. ಅವಳು ಅಗ್ನಿಯನ್ನು ಪ್ರವೇಶಿಸಿ ಮೃತ್ಯುವನ್ನಪ್ಪುವಾಗ ಪ್ರತಿಜ್ಞೆಯನ್ನು ನುಡಿದ ಕಾರಣ ಅದರ ಪ್ರಭಾವ, ಪ್ರಖರತೆ ತುಂಬಾ ಅಧಿಕಗೊಂಡಿದೆ. ಪುಂಜಿಕಸ್ಥಲೆಯನ್ನು ಬಲಾತ್ಕರಿಸಿದ ಕಾರಣ ಬ್ರಹ್ಮದೇವನು ರಾವಣನಿಗೆ ಶಾಪವನ್ನು ಕೊಟ್ಟಿದ್ದಾನೆ. ರಂಭೆಯ ಮೇಲೆ ಬಲಾತ್ಕಾರವನ್ನು ಎಸಗಿದ ಕಾರಣ ನಲಕೂಬರನೂ ರಾವಣನನ್ನು ಶಪಿಸಿದ್ದಾನೆ. ಈ ಎರಡೂ ಶಾಪಗಳ ಸ್ವರೂಪ, ಪರಿಣಾಮ ಒಂದೇ ರೀತಿಯದಾಗಿದೆ; ವ್ಯತ್ಯಾಸವಿರುವುದು ಅವುಗಳ ವಿವರಗಳಲ್ಲಿ ಮಾತ್ರ; ಈ ಎರಡೂ ಶಾಪಗಳು ಕಟ್ಟಳೆಯವಾಗಿವೆ. ಬ್ರಹ್ಮದೇವನ ಶಾಪದ ಭಯವು ರಾವಣನಿಗೆ ಹಗಲಿರುಳೂ ಕಾಡುತ್ತಿತ್ತು. ರಾವಣನು ತನಗಿದ್ದ ಭೀತಿಯನ್ನು ಮಂತ್ರಿಯಾದ ಮಹಾಪಾರ್ಶ್ವನ ಬಳಿ ತೋಡಿಕೊಂಡಿದ್ದಾನೆ.
ಮಹಾಪಾರ್ಶ್ವನು ರಾವಣನಿಗೆ ಕುಕ್ಕುಟ ರೀತಿಯಿಂದ ಸೀತೆಯನ್ನು ಬಲಾತ್ಕರಿಸಿ ಭೋಗಿಸಬೇಕೆಂಬ ಸಲಹೆಯನ್ನಿತ್ತನು; ಅದರಿಂದಾಗುವ ಪರಿಣಾಮಗಳನ್ನು ಎದುರಿಸುವ ಬಲವು ರಾವಣನ ಬಳಿಯಿದೆ ಎಂದು ಮುಂತಾಗಿ ಹೊಗಳಿದನು. ಆಗ ರಾವಣನು ತಾನು ಪುಂಜಿಕಸ್ಥಲೆಯನ್ನು ಬಲಾತ್ಕರಿಸಿದಾಗ ಬ್ರಹ್ಮದೇವನಿಂದ ಹೊಂದಿದ, ಈವರೆಗೆ ರಹಸ್ಯವಾಗಿಟ್ಟ ಶಾಪದ ವಿಷಯವನ್ನು ಮಹಾಪಾರ್ಶ್ವನಿಗೆ ಏಕಾಂತದಲ್ಲಿ ಹೇಳಿದನು:೭೪

           ಇತ್ಯಹಂ ತಸ್ಯ ಶಾಪಸ್ಯ ಭೀತಃ ಪ್ರಸಭಮೇವ ತಾಮ್ |
           ನಾರೋಹಯೇ ಬಲಾತ್ಸೀತಾಂ ವೈದೇಹೀಂ ಶಯನೇ ಶುಭೇ ||

“ಈ ರೀತಿ ಬ್ರಹ್ಮನ ಶಾಪಕ್ಕೆ ತುಂಬಾ ಹೆದರಿಕೊಂಡ ನಾನು ವಿದೇಹ ಕನ್ಯಯಾದ ಸೀತೆಯನ್ನು ಶುಭಶಯ್ಯೆಯ ಮೇಲೆ ಭೋಗಿಸಲು ಅಸಮರ್ಥನಾಗಿದ್ದೇನೆ” ಎಂದು ಸ್ವತಃ ರಾವಣನು ಹೇಳಿದ್ದಾನೆ.
——————
೭೪. ಯುದ್ಧಕಾಂಡ, ೧೩.