ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಉಃಶಾಪವನ್ನು ಅಹಲ್ಯೆಯು ಬೇಡಿರಲಿಲ್ಲವಾದರೂ ಗೌತಮನು ತಾನಾಗಿಯೇ ಅನುಗ್ರಹಿಸಿದ ಕಾರಣ ಈ ಉಃಶಾಪವು ಅಯಾಚಿತವಾಗಿದೆ. ಉತ್ತರಕಾಂಡದಲ್ಲಿಯ ಶಾಪದಲ್ಲಿ, ಅಹಲ್ಯೆಯು ಗೌತಮನನ್ನು ಪ್ರಾರ್ಥಿಸಿ ತನ್ನ ಮೇಲೆ ಕೃಪೆ ಮಾಡಬೇಕೆಂದು ಬೇಡಿಕೊಂಡಿದ್ದಾಳೆ. ಹೀಗಿರುವುದರಿಂದ ಈ ಉಃಶಾಪವು ಯಾಚಿತವಾಗಿದೆ.

೧೪. ವಸಿಷ್ಠಪುತ್ರ < ತ್ರಿಶಂಕು

ಬಾಲಕಾಂಡ/೫೮

ಶತಾನಂದನು ರಾಮನಿಗೆ ವಿಶ್ವಾಮಿತ್ರನ ಪೂರ್ವವೃತ್ತಾಂತವನ್ನು ಹೇಳುತ್ತಾನೆ:
ಬ್ರಹ್ಮರ್ಷಿಪದವನ್ನು ಪಡೆಯಲು ವಿಶ್ವಾಮಿತ್ರನು ಉಗ್ರತಪಸ್ಸನ್ನು ಆಚರಿಸಿದನು. ಬ್ರಹ್ಮದೇವನು ಪ್ರಸನ್ನನಾಗಿ ವಿಶ್ವಾಮಿತ್ರನನ್ನು 'ರಾಜರ್ಷಿ' ಎಂದು ಗೌರವಿಸಿದನು. ಬ್ರಹ್ಮರ್ಷಿಪದವು ಪ್ರಾಪ್ತವಾಗದ ಕಾರಣ ವಿಶ್ವಾಮಿತ್ರನು ಖಿನ್ನನಾಗಿ ಪುನಃ ತಪಶ್ಚರ್ಯೆಗೆ ಪ್ರಾರಂಭಿಸಿದನು. ಆಗ ಇಕ್ಷ್ವಾಕುಕುಲವರ್ಧಕನಾದ ತ್ರಿಶಂಕು ಎಂಬ ರಾಜನು ಆಳುತ್ತಿದ್ದನು. ಅವನು ಸತ್ಯನಿಷ್ಠನೂ ಜಿತೇಂದ್ರಿಯನೂ ಅಗಿದ್ದನು. ದೇಹಸಹಿತವಾಗಿ ಸ್ವರ್ಗವನ್ನು ತಲುಪಬೇಕೆಂಬ ಆಸೆ ಅವನಿಗಿತ್ತು. ಆತನು ತನ್ನ ಮನೋರಥವನ್ನು ಕುಲಪುರೋಹಿತನಾದ ವಸಿಷ್ಠನಿಗೆ ತಿಳಿಸಿದಾಗ ಆತನು 'ಇದು ಅಸಾಧ್ಯ'ವೆಂದು ಸ್ಪಷ್ಟವಾಗಿ ತಿಳಿಸಿದನು. ಆಗ ರಾಜನು ದಕ್ಷಿಣ ದಿಶೆಯಲ್ಲಿ ತಪಃಸಾಧನೆಯಲ್ಲಿ ತೊಡಗಿದ ವಸಿಷ್ಠ ಪುತ್ರರನ್ನು ಕಂಡನು; ತಾನು ಬಂದ ಉದ್ದೇಶವನ್ನೂ ವಸಿಷ್ಠನ ಅಭಿಪ್ರಾಯವನ್ನೂ ಅವರಿಗೆ ತಿಳಿಸಿ, ತಾನು ಆಚರಿಸಲಿರುವ ಯಜ್ಞದ ಪೌರೋಹಿತ್ಯವನ್ನು ಸ್ವೀಕರಿಸಬೇಕೆಂದು ಅವರಿಗೆ ವಿನಂತಿಸಿದನು. ಗುರುವು ನಿರಾಕರಿಸಿದ್ದರಿಂದ ಗುರುಪುತ್ರರಿಗೆ ಶರಣು ಬಂದದ್ದೇನೆಂದು ಹೇಳಿದನು. ಗುರುಪುತ್ರರು ರಾಜನ ಮಾತನ್ನು ಕಡೆಗಾಣಿಸಿದರು. ವಸಿಷ್ಠನು ಅಲ್ಲಗಳೆದ ಸಂಗತಿಯನ್ನು ಅಂಗೀಕರಿಸುವದೆಂದರೆ ಆತನಿಗೆ ಅಪಮಾನಗೊಳಿಸಿದಂತೆ ಎಂಬ ಭಾವನೆ ಅವರದಾಗಿತ್ತು, ತ್ರಿಶಂಕುವಿನ ನುಡಿಗಳು ಅವಮರ್ಯಾದೆಯವೆನಿಸಿದವು. ಗುರುಪುತ್ರರು ತ್ರಿಶಂಕುವಿನ ಮೇಲೆ ಬಹಳೇ ಕೋಪಗೊಂಡರು. ಆಗ ತ್ರಿಶಂಕುವು ನುಡಿದದ್ದೇನೆಂದರೆ: “ಗುರು ಮತ್ತು ಗುರುವಿನ ಪುತ್ರರು ನನ್ನನ್ನು ಬಿಟ್ಟು ಕೊಡುತ್ತಿದ್ದಾರೆ; ಆದ್ದರಿಂದ ನಾನು ಇನ್ನಿತರರ ಆಶ್ರಯವನ್ನು ಕಂಡುಕೊಳ್ಳುತ್ತೇನೆ.”