ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೧೭. ವಿಶ್ವಾಮಿತ್ರ < ಅವನ ಪುತ್ರರು

ಬಾಲಕಾಂಡ/೬೨

ಶತಾನಂದನು ರಾಮನಿಗೆ ಶುನಃಶೇಪನ ವೃತ್ತಾಂತವನ್ನು ಹೇಳುತ್ತಿದ್ದಾನೆ:
ಅಯೋಧ್ಯಾಪತಿ ಅಂಬರೀಷ ಮಹಾತ್ಮನು ಯಜ್ಞವನ್ನು ಪ್ರಾರಂಭಿಸಿದಾಗ ಅಲ್ಲಿಯ ಯಜ್ಞಪಶುವನ್ನು ಇಂದ್ರನು ಅಪಹರಿಸಿದನು. ರಾಜನ ಪಾತಕದಿಂದ ಹೀಗಾಗಿರಬೇಕೆಂದು ಭಾವಿಸಿದ ಪುರೋಹಿತನು ರಾಜನಿಗೆ, ನರಪಶುವನ್ನು ತರಲು ಹೇಳಿದನು. ರಾಜನು ನರಪಶುವನ್ನು ತರಲು ತುಂಬಾ ಪ್ರಯತ್ನಪಟ್ಟರೂ, ಹಣಕ್ಕಾಗಿ ಮಗನನ್ನು ನರಪಶುವಾಗಿ ಕೊಡಲು ಯಾರೊಬ್ಬರೂ ಒಪ್ಪಲಿಲ್ಲ. ಹಲವಾರು ಪ್ರದೇಶಗಳನ್ನು ದಾಟಿ ರಾಜನು ಸಹಸ್ರಾರು ಹಸುಗಳನ್ನಿಟ್ಟುಕೊಂಡು ಭೃಗತುಂಗ ಪರ್ವತದ ಬಳಿ ಹೋದನು. ಅಲ್ಲಿ 'ಋಚೀಕ'ನೆಂಬ ಋಷಿಯು ತನ್ನ ಪತ್ನಿಯ ಸಮೇತನಾಗಿ ವಾಸಿಸುತ್ತಿದ್ದನು. ಒಂದು ಲಕ್ಷ ಹಸುಗಳ ಕ್ರಮದಲ್ಲಿ ಯಜ್ಞಕ್ಕಾಗಿ ಒಬ್ಬ ಪುತ್ರನನ್ನ ಅರ್ಪಿಸಬೇಕೆಂದು ಋಷಿಗೆ ಈ ರಾಜನು ಹೇಳಿದನು. ಜ್ಯೇಷ್ಠಪುತ್ರನನ್ನು ವಿಕ್ರಯಿಸಬಾರದೆಂಬ ಮನಸ್ಸು ಋಷಿಯದಾಗಿತ್ತು; ಅಚ್ಚು ಮೆಚ್ಚಿನವನಾದ ಕನಿಷ್ಠ ಪುತ್ರನನ್ನು ಕೊಡಕೂಡದೆಂಬ ಮನಸ್ಸು ಋಷಿ ಪತ್ನಿಯದಾಗಿತ್ತು. ಆಗ ನಡುವಿನ ಪುತ್ರನಾದ ಶುನಃಶೇಪನು ತಾನಾಗಿ ಸಿದ್ಧನಾದನು. ಋಷಿಗೆ ರತ್ನಗಳ ರಾಶಿ, ಸುವರ್ಣ ಮತ್ತು ಒಂದು ಲಕ್ಷ ಹಸುಗಳು ದೊರೆತವು. ಅಂಬರೀಷನಿಗೆ ಯಜ್ಞಕ್ಕಾಗಿ ನರಪಶು ದೊರಕಿತು. ಆತನನ್ನು ಜೊತೆಗೂಡಿ ಅಂಬರೀಷನು ನಡೆದಾಗ ದಾರಿಯಲ್ಲಿ ಶುನಃಶೇಪನ ಸೋದರಮಾವನಾದ, ತಪಾಚರಣೆಯಲ್ಲಿ ನಿರತನಾದ, ವಿಶ್ವಾಮಿತ್ರನು ಕಾಣಿಸಿಕೊಂಡನು. ಶುನಃಶೇಪನು ವ್ಯಥಿತನಾಗಿದ್ದನು. ವಿಶ್ವಾಮಿತ್ರನಿಗೆ ಶರಣುಹೋಗಿ ಇತ್ತೆಂದನು:
"ನನಗೆ ತಾಯಿ-ತಂದೆ, ಬಾಂಧವರು ಯಾರೂ ಇಲ್ಲ; ನೀವು ಧರ್ಮದ ಬಲದಿಂದ ನನ್ನನ್ನು ರಕ್ಷಿಸಿರಿ! ಅಂಬರೀಷ ರಾಜನು ಕೃತಕೃತ್ಯನಾಗಬೇಕು; ನಾನು ಕೂಡ ದೀರ್ಘಾಯುಷಿಯಾಗಿ ಸ್ವರ್ಗವನ್ನು ಸೇರಬೇಕೆಂಬ ಇಚ್ಛೆ ನನಗಿದೆ. ನೀವು ತಂದೆಯಂತೆ ನನ್ನನ್ನು ರಕ್ಷಿಸಿರಿ!"
ಆಗ ವಿಶ್ವಾಮಿತ್ರನು ಅಂಬರೀಷರ ಯಜ್ಞವು ಪೂರ್ಣವಾಗಬೇಕು; ಶುನಃಶೇಪನ ರಕ್ಷಣೆಯೂ ಆಗಬೇಕೆಂಬ ಉದ್ದೇಶದಿಂದ ಪ್ರೇತಿತನಾಗಿ, ತನ್ನ ಮಕ್ಕಳಿಗೆ ಈ ರೀತಿ ಅಂದನು: "ಪಾರಲೌಕಿಕ ಹಿತಕ್ಕಾಗಿ ಶುಭವನ್ನು ಕೋರುವ ಪಿತರರು ಪುತ್ರರನ್ನು ಪಡೆಯುತ್ತಾರೆ. ಈ ಋಷಿಪುತ್ರನಾದ ಬಾಲಕನು ನನ್ನಿಂದ ರಕ್ಷಣೆಯನ್ನು ಬಯಸುತ್ತಿದ್ದಾನೆ; ಕಾರಣ ನೀವು ಆತನಿಗೆ ಜೀವದಾನವನ್ನು ಕೊಟ್ಟು ಆತನ