ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಈಡಾದರು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲೋಸುಗ ಇಂದ್ರನು ರಂಭೆ ಎಂಬ ಅಪ್ಸರೆಯನ್ನು ಯೋಜಿಸಿದನು. "ನೀನು ನಿನ್ನ ಸೌಂದರ್ಯದಿಂದ ವಿಶ್ವಾಮಿತ್ರನನ್ನು ಮೋಹಗೊಳಿಸಿ, ಅವನನ್ನು ವಿಷಯಾಸಕ್ತನನ್ನಾಗಿ ಮಾಡು! ಆತನ ತಪೋಭಂಗವೆಂದರೆ ಒಂದು ದೇವತಾಕಾರ್ಯ; ಈ ದುಸ್ತರವಾದ ಕಾರ್ಯವು ನಿನ್ನಿಂದಾಗಲಿದೆ" ಎಂದು ಇಂದ್ರನು ಆಕೆಗೆ ಹೇಳಿದನು. ಇಂದ್ರನ ಮಾತನ್ನು ಕೇಳಿ ರಂಭೆಯು ಲಜ್ಜಿತಳಾದಳು; ಭಯಗೊಂಡಳು; ವಿಶ್ವಮಿತ್ರನ ಕಠೋರವೃತ್ತಿಯ ಕಲ್ಪನೆ ಅವಳಿಗಿತ್ತು. ಈ ದುಸ್ತರ ಕಾರ್ಯವನ್ನು ನೆರವೇರಿಸಲು ತನ್ನನ್ನು ನೇಮಿಸಬಾರದೆಂದು ಬೇಡಿಕೊಂಡಳು; ಆದರೆ, ಇಂದ್ರನು ಆಕೆಗೆ ಅಭಯವನ್ನು ನೀಡಿದನು. ಕೋಗಿಲೆಯ ರೂಪದಲ್ಲಿ ತಾನು ಮನ್ಮಥನೊಡನೆ ಆಕೆಯ ನಿಕಟದಲ್ಲಿ ಇರುವ ಆಶ್ವಾಸನೆಯನ್ನಿತ್ತನು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ರಂಭೆಗೆ ಆಜ್ಞಾಪಿಸಿದನು.
ಅನುಪಮ ರೂಪವನ್ನು ಧರಿಸಿ ರಂಭೆಯು ವಿಶ್ವಾಮಿತ್ರನನ್ನು ಮೋಹಿಸುವ ಹೊಂಚನ್ನು ಹಾಕಿದಳು. ಕೋಗಿಲೆಯ ಇಂಪಾದ ಧ್ವನಿಯನ್ನು ಕೇಳಿ ವಿಶ್ವಾಮಿತ್ರನು ಉಲ್ಲಸಿತನಾದನು. ತುಸು ಸಮಯದ ನಂತರ ಲಾವಣ್ಯವತಿಯಾದ ರಂಭೆಯು ಆತನಿಗೆ ಕಾಣಿಸಿಕೊಂಡಳು; ಆಗ ಅವನಿಗೆ ಸಂದೇಹವುಂಟಾಯಿತು. ತನ್ನ ತಪೋಭಂಗಕ್ಕಾಗಿ ಇಂದ್ರನು ಈ ಕಾರಸ್ಥಾನವನ್ನು ರಚಿಸಿದ್ದಾನೆಂದು ಮನ ದಟ್ಟಾಗುತ್ತಲೇ ಆತನು ರಂಭೆಗೆ ಶಾಪವನ್ನು ಕೊಟ್ಟನು-

           ಯನ್ಮಾಂ ಲೋಭಯಸೇ ರಂಭೇ ಕಾಮಕ್ರೋಧಜಯೈಷಿಣಮ್ |
           ದಶವರ್ಷಸಹಸ್ರಾಣಿ ಶೈಲೀ ಸ್ಥಾಸ್ಯಸಿ ದುರ್ಭಗೇ ‖೧೨‖
           ಬ್ರಾಹ್ಮಣಃ ಸುಮಹಾತೇಜಾಸ್ತಪೋಬಲಸಮನ್ವಿತಃ |
           ಉದ್ಧರಿಷ್ಯತಿ ರಂಭೇ ತ್ವಾಂ ಮತ್ಕ್ರೋಧಕಲುಷೀಕೃತಾಮ್ ‖೧೩‖


"ಎಲೈ ರಂಭೆಯೇ! ಕಾಮಕ್ರೋಧಗಳನ್ನು ನಿಗ್ರಹಿಸುವ ಆಕಾಂಕ್ಷೆಯನ್ನಿಟ್ಟುಕೊಂಡ ನನ್ನನ್ನು ಮೋಹಕ್ಕೆ ಎಳೆಯುತ್ತಿರುವಿ; ಕಾರಣ, ಎಲೌ ದುರ್ಭಗೆ! ಹತ್ತು ಸಾವಿರ ವರ್ಷಗಳವರೆಗೆ ನೀನು ಕಲ್ಲಾಗಿ ಬಿದ್ದಿರುವೆ. ನನ್ನ ಕ್ರೋಧದಿಂದ ಪೀಡಿತಳಾದ ನಂತರ ನಿನ್ನ ಉದ್ಧಾರವು ಮಹಾತೇಜಸ್ವಿಯಾದ, ತಪೋಬಲವುಳ್ಳ ಒಬ್ಬ ಬ್ರಾಹ್ಮಣನಿಂದಾಗುವುದು." ರಂಭೆಯು ಕೂಡಲೇ ಕಲ್ಲಾಗಿ ಬಿದ್ದಳು. ಕೋಪವನ್ನು ತಡೆಹಿಡಯಲಾಗಲಿಲ್ಲವೆಂದು ವಿಶ್ವಾಮಿತ್ರನಿಗೆ ಪಶ್ಚಾತ್ತಾಪವಾಯಿತು.