ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೨೯


ಶಾಪದ ಉತ್ತರಾರ್ಧವು ಪಶ್ಚಾತ್ತಾಪದ ಪರಿಣಾಮರೂಪವಾಗಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ರಂಭೆಯು ಅದನ್ನು ಬೇಡಿಕೊಳ್ಳುವ ಮೊದಲೇ ಈ ಉಃಶಾಪವನ್ನು ಕೊಟ್ಟ ಕಾರಣ ಅದು ಅಯಾಚಿತ ಉಃಶಾಪವಾಗಿದೆ.

೧೯. ಕೌಸಲ್ಯಾ < ರಾಮ

ಅಯೋಧ್ಯಾಕಾಂಡ/೨೧

ದಶರಥ ರಾಜನಿಂದ ಕೈಕೇಯಿಯು ಪಡೆದ ವರಗಳನುಸಾರ ರಾಮನು ವನವಾಸಕ್ಕೆ ಹೋಗುವದೆಂದು ನಿಶ್ಚಯಿಸಿದನು. ತನ್ನ ಮಾತೆಯ ಅನುಮತಿಯನ್ನು ಪಡೆಯಲು ಆತನು ಲಕ್ಷ್ಮಣನೊಡನೆ ಕೌಸಲ್ಯೆಯತ್ತ ಬಂದನು. ಲಕ್ಷ್ಮಣ ಮತ್ತು ಕೌಸಲ್ಯೆ ಇಬ್ಬರೂ ರಾಮನನ್ನು ಆತನ ನಿಶ್ಚಯದಿಂದ ಪರಾವೃತ್ತಗೊಳಿಸಬೇಕೆಂದು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲಗೊಂಡವು. ರಾಮನ ದೃಢನಿಶ್ಚಯವನ್ನು ತಿಳಿದುಕೊಂಡು ಕೌಸಲ್ಯೆಯು ಕೊನೆಯ ಮಾತೆಂದು (ಅಂತ್ಯದಲ್ಲಿ) ಈ ರೀತಿ ಎಂದಳು:
"ಎಲೈ ಧರ್ಮನಿಷ್ಟನೇ! ನೀನು ಧರ್ಮಜ್ಞನು; ಕಾರಣ ನನ್ನ ಆಜ್ಞೆಯನ್ನು ಪರಿಪಾಲಿಸುವ ಧರ್ಮವನ್ನಾಚರಿಸಬೇಕಿದ್ದರೆ ರಾಜ್ಯವನ್ನು ತ್ಯಜಿಸಿ ನೀನು ಇಲ್ಲಿಯೇ ಇರು! ನನ್ನ ಶುಶ್ರೂಷೆಯಲ್ಲಿ ತೊಡಗಿ 'ಮಾತೃಸೇವೆ'ಯಂಥ ಶ್ರೇಷ್ಠಧರ್ಮವನ್ನಾಚರಿಸು. ಎಲೈ ಕಂದನೇ! ಮಾತೃಸೇವೆಯಲ್ಲಿ ನಿರತನಾಗಿ ಸ್ವಗೃಹದಲ್ಲಿಯೇ ಶುದ್ಧನಾಗಿದ್ದ ಕಾಶ್ಯಪನು ಮಹಾತಪಸ್ಸಿನಿಂದ ಯುಕ್ತನಾಗಿ ಮಾತೃಸೇವೆಯ ಫಲದಿಂದ ಸ್ವರ್ಗಕ್ಕೆ ಹೋದನು. ದಶರಥರಾಜನು ಯಾವ ರೀತಿ ನಿನಗೆ ಪೂಜ್ಯನೋ ಅದೇ ರೀತಿ ಘನತೆಗೌರವಗಳಲ್ಲಿ ನಾನು ಸಹ ನಿನಗೆ ಪೂಜ್ಯಳು; ಆದ್ದರಿಂದ ನಾನು ಅನುಮತಿಯನ್ನು ಕೊಡಲಾರೆ; ನೀನು ವನಕ್ಕೆ ಹೋಗಬೇಡ! ನಿನ್ನನ್ನು ಅಗಲಿದ ನಂತರ ನನ್ನ ಬಾಳಿನ ಪ್ರಯೋಜನವಾದರೂ ಏನು? ತೃಷಭಕ್ಷಣೆ ಮಾಡಿದರೂ ನಿನ್ನೊಡನೆ ಇರುವದು ಕ್ಷೇಮಕರವಿರುತ್ತದೆ. ಇಷ್ಟು ಹೇಳಿಯೂ ನೀನು, ಶೋಕಾಕುಲಳಾದ ನನ್ನನ್ನು ತೊರೆದು ಕಾಡಿಗೆ ಹೋದರೆ, ನಾನು ಅಹಾರ-ಪಾನೀಯಗಳನ್ನು ತ್ಯಜಿಸಿ ಮರಣವನ್ನು ಕಾಯುವೆ; ನಿನ್ನ ವಿಯೋಗವಾದನಂತರ ನಾನು ಜೀವಿಸಿರಲು ಶಕ್ತಳಾಗಲಾರೆ!


           ತತಸ್ತ್ವಂ ಪ್ರಾಪ್ಸ್ಯಸೇ ಪುತ್ರ ನಿರಯಂ ಲೋಕವಿಶ್ರುತಮ್ |
           ಬ್ರಹ್ಮಹತ್ಯಾಮಿವಾಧರ್ಮಾತ್ಸಮುದಃ ಸರಿತಾಂ ಪತಿಃ ॥೨೮॥