ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಕುಚೋದ್ಯಗಳು ನನ್ನ ಕಿವಿಗೆ ಬಂದಿವೆ. ನಿನ್ನ ಪಾರುಪತ್ಯಕ್ಕಾಗಿ ದೇವತೆಯರು ಸಜ್ಜಾಗುತ್ತಿದ್ದಾರೆ. ಕಠೋರ ವ್ರತವನ್ನಾಚರಿಸುತ್ತಿದ್ದ ಶುದ್ಧ, ಜಿತೇಂದ್ರಿಯನಾದ ನಾನು, ನಿಷ್ಕಾರುಣವಾಗಿ ಪಾರ್ವತಿಯ ರೋಷಕ್ಕೆ ಬಲಿಯಾದೆ. ನಾನು ಧರ್ಮಾ ಚರಣೆಗೆಂದು ಹಿಮಾಲಯ ಪರ್ವತಕ್ಕೆ ಹೋದಾಗ ಪಾರ್ವತಿ-ಪರಮೇಶ್ವರರ ದರ್ಶನವು ನನಗಾಯಿತು. ಅನುಪಮಲಾವಣ್ಯವತಿಯಾದ ಈ ಸ್ತ್ರೀಯತ್ತ ಬೇರೆ ಯಾವ ಉದ್ದೇಶವಿರದೇ ಕೇವಲ ಕುತೂಹಲದಿಂದ- ನಾನು ಎಡಗಣ್ಣಿನಿಂದ ನೋಡಿದ ಕ್ಷಣವೇ-


            ದೇವ್ಯಾ ದಿವ್ಯಪ್ರಭಾವೇಣ ದಗ್ಧಂ ಸವ್ಯಂ ಮಮೇಕ್ಷಣಮ್ |
            ರೇಣುಧ್ವಸ್ತಮಿವ ಜ್ಯೋತಿಃ ಪಿಂಗಲತ್ವಮುಪಾಗತಮ್ ‖೨೪‖


ದೇವಿಯ ದಿವ್ಯಪ್ರಭಾವದಿಂದ ನನ್ನ ಎಡಗಣ್ಣು ಸುಟ್ಟು ಭಸ್ಮವಾಯಿತು. ಬಲಗಣ್ಣು ಕೊಳೆ ಸೇರಿಕೊಂಡು ಕಂದುಬಣ್ಣದ್ದಾಯಿತು.
ಆನಂತರ ನಾನು ತಪಸ್ಸಿನಿಂದ ಮಹಾದೇವನನ್ನು ಪ್ರಸನ್ನಗೊಳಿಸಿದೆನು. ಆತನ ಸ್ನೇಹವನ್ನು ಪಡೆದೆನು; ಆದರೆ ಏಕಾಕ್ಷ, ಪಿಂಗಲ ಎಂಬ ಹೆಸರು ನನಗೆ ದೃಢವಾಯಿತು. ಆದಕಾರಣ ಹೇ ರಾವಣನೇ, ನೀನು ಪಾಪಕೃತ್ಯಗಳಿಂದ ದೂರವಾಗಿರು! ಕುಲಕ್ಕೆ ಕಲಂಕವನ್ನು ತರುವ ಯಾವ ಕಾರ್ಯವನ್ನೂ ಮಾಡಬೇಡ!"
ದೂತನ ಈ ಭಾಷಣವನ್ನು ಕೇಳಿ ರಾವಣನು ಕೋಪಗೊಂಡನು. ದೂತನ ಸಮೇತ ಕುಬೇರನನ್ನು ಯಮಸದನಕ್ಕೆ ಕಳುಹಿಸುವ ಪ್ರತಿಜ್ಞೆಯನ್ನು ಮಾಡಿ, ಆ ದೂತನನ್ನು ಕೊಂದುಬಿಟ್ಟನು.
ಈ ಶಾಪವು ಸಂಶಯಾಸ್ಪದವಿದೆ. ಕುಬೇರನ ಎಡಗಣ್ಣು ಸುಟ್ಟುಹೋಗಿದ್ದು ಮತ್ತು ಬಲಗಣ್ಣು ಕಂದುಬಣ್ಣಕ್ಕೆ ತಿರುಗಿದ್ದು, ಪಾರ್ವತಿಯ ದಿವ್ಯತೇಜಸ್ಸಿನಿಂದಲೋ ಅಥವಾ ಶಾಪದಿಂದಲೋ? ಪಾರ್ವತಿಯು ಶಾಪವನ್ನು ಉಚ್ಚರಿಸಲಿಲ್ಲ; ಶಾಪವು ಒಂದು ವಾಚಾ-ಶಕ್ತಿಯಾಗಿರುತ್ತದೆ; ಅಂದಬಳಿಕ ಮೇಲಿನ ಘಟನೆಯು ಶಾಪ ವೆಂದಾಗಲಾರದು.

೪೨. ನಂದೀಶ್ವರ < ರಾವಣ

ಉತ್ತಕರಾಂಡ/೧೬

ರಾವಣನಿಗೆ ನಂದಿಯು ಕೊಟ್ಟ ಶಾಪದ ವೃತ್ತಾಂತವನ್ನು ಅಗಸ್ತ್ಯನು ರಾಮನಿಗೆ ಹೇಳುತ್ತಾನೆ: