ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೭೧


ವಲ್ಕಲಗಳನ್ನು ಭಗ್ನಗೊಳಿಸುವದು, ಧ್ವಂಸಗೊಳಿಸುವದು ಮುಂತಾದವುಗಳನ್ನು ಮಾಡುತ್ತಾನೆ. ಬ್ರಹ್ಮದಂಡದಿಂದ ಕೂಡ ಆತನ ವಧೆಯಾಗುವಂತಿಲ್ಲ. ಹೀಗಿದ್ದುದರಿಂದ ಋಷಿಗಳು ಆತನ ಅತಿಕ್ರಮಣವನ್ನು ಸಹಿಸುತ್ತಿದ್ದರು. ತಂದೆಯಾದ ಕೇಸರಿ ಹಾಗೂ ವಾಯು ಇದನ್ನು ನಿಷೇಧಿಸಿದರು. ಹನುಮಂತನು ಮರ್ಯಾದೆಯನ್ನು ಮೀರುತ್ತಿದ್ದನು. ಭೃಗು ಹಾಗೂ ಅಂಗೀರಸ ವಂಶದಲ್ಲಿಯ ಋಷಿಗಳು ಅವನ ಈ ಕಪಿಚೇಷ್ಟೆಗಳಿಂದ ಸಿಟ್ಟಾದರು; ಆದರೆ ಹನುಮಂತನನ್ನು ನಾಶಗೊಳಿಸುವ ಇಚ್ಛೆಯನ್ನು ಇಟ್ಟುಕೊಳ್ಳದೇ ಮತ್ತು ಹೆಚ್ಚಾದ ಕೋಪವನ್ನು ವ್ಯಕ್ತಮಾಡದೇ ಅವರು ಈ ರೀತಿ ನುಡಿದರು:

            ಬಾಧಸೇ ಯತ್ಸಮಾಶ್ರಿತ್ಯ ಬಲಮಸ್ಮಾದ್ಪ್ಲವಂಗಮ ‖೩೪‖
            ತದ್ದೀರ್ಘಕಾಲಂ ವೇತ್ತಾಸಿ ನಾಸ್ಮಾಕಂ ಶಾಪಮೋಹಿತಃ |
            ಯದಾ ತೇ ಸ್ಮಾರ್ಯತೇ ಕೀರ್ತಿಸ್ತದಾ ತೇ ವರ್ಧತೇ ಬಲಮ್ ‖೩೫‖


"ಹೇ ಕಪಿಯೇ, ಬಲದ ಆಶ್ರಯದಿಂದ ನೀನು ನಮ್ಮನ್ನು ಕಾಡುತ್ತಿರುವಿ; ನಮ್ಮ ಶಾಪದಿಂದ ಬಹುಕಾಲದವರೆಗೆ ಆ ಬಲದ ಜ್ಞಾಪಕವು ನಿನಗೆ ಇರಲಾರದು. ನಿನ್ನ ಯೋಗ್ಯತೆಯ ಬಗ್ಗೆ ಯಾರಾದರೂ ನಿನಗೆ ಜ್ಞಾಪಿಸಿಕೊಟ್ಟರೆ ಅಂದಿನಿಂದ ನಿನ್ನ ಒಲವು ಪುನಃ ವೃದ್ಧಿಂಗತವಾಗುವದು."
ಮಹರ್ಷಿಗಳ ಈ ಉದ್ಗಾರಗಳಿಂದ ಹನುಮಂತನಿಗೆ ಸ್ವಸಾಮರ್ಥ್ಯದ ಅರಿವು ಉಳಿಯಲಿಲ್ಲವಾದ್ದರಿಂದ ಆತನು ಸೌಮ್ಯವೃತ್ತಿಯವನಾಗಿ ಆಶ್ರಮಗಳಲ್ಲಿ ಸಂಚರಿಸಹತ್ತಿದನು. ವಾಲಿ ಮತ್ತು ಸುಗ್ರೀವರಲ್ಲಿ ಹಗೆತನ ಉಂಟಾದಾಗ ಹನುಮಂತನಿಗೆ ತನ್ನಲ್ಲಿದ್ದ ಬಲದ ಸ್ಮರಣೆ ಇರಲಿಲ್ಲವಾದ್ದರಿಂದ ವಾಲಿಯ ಪಾರುಪತ್ಯವನ್ನು ಮಾಡುವದು ಆತನಿಂದಾಗಲಿಲ್ಲ.
ಶಾಪದ ಈ ಉತ್ತರಭಾಗವು ಉಃಶಾಪದಂತಿದೆ. ಅದು ಅಯಾಚಿತವಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ಹನುಮಂತನು ಉಃಶಾಪವನ್ನು ಬೇಡಿಕೊಂಡ ದಾಖಲೆಯಿಲ್ಲ.

ಉತ್ತರಕಾಂಡ/೩೫

            ಅಮೋಘಶಾಪೈಃ ತಾಪಸ್ತು ಮುನಿಭಿಃ ಪುರಾ |
            ನ ವೇತ್ತಾ ಹಿ ಬಲಂ ಸರ್ವಂ ಬಲೀ ಸನ್ನರಿಮರ್ದನ ‖೧೬‖