ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಹೆಸರು 'ಜಾಂಬವಾನ', ಈತನು ಸ್ವಭಾವದಿಂದ ಶಾಂತನಾಗಿದ್ದನು. ಅಣ್ಣನ
ಮಾತಿನಂತೆ ವರ್ತಿಸುತ್ತಿದ್ದನು.
ಏತೆನ ಸಾಹ್ಯಂ ತು ಮಹತ್ಕೃತಂ ಶಕ್ರಸ್ಯ ಧೀಮತಾ |
ದೇವಾಸುರೇ ಜಾಂಬವತಾ ಲಬ್ಧಾಶ್ಚ ಬಹವೋ ವರಾಃ ‖೧೨‖

ಸುರಾಸುರದಲ್ಲಿ ಯುದ್ಧವು ನಡೆದಾಗ ಈ ಬುದ್ದಿವಂತನಾದ ಜಾಂಬವಂತನು
ಇಂದ್ರನಿಗೆ ಸಹಾಯ ಮಾಡಿ ಅನೇಕ ವರಗಳನ್ನು ಪಡೆದುಕೊಂಡಿದ್ದಾನೆ.
ಅನೇಕ ವರಗಳನ್ನು ಪಡೆದುಕೊಂಡ ಉಲ್ಲೇಖಮಾತ್ರವಿದೆ. ಪ್ರತ್ಯಕ್ಷದಲ್ಲಿ
ಯಾವ ವರಗಳು ದೊರೆತಿದ್ದವೆಂಬುದು ತಿಳಿದುಬರುವದಿಲ್ಲ.

೪೭. ? < ಕುಂಭಕರ್ಣ

ಯುದ್ದಕಾಂಡ/೬೧

ವಿಭೀಷಣನು ರಾಮನಿಗೆ ಕುಂಭಕರ್ಣನ ವಿಷಯವನ್ನು ಹೇಳುತ್ತಿದ್ದಾನೆ.
ಸುದೃಢಕಾಯನಾದ, ಮೇಘವರ್ಣದ ಕಾಂತಿಯುಳ್ಳ ಕುಂಭಕರ್ಣನನ್ನು,
ಆತನು ಧರಿಸಿದ ಸುವರ್ಣಾಲಂಕಾರಗಳನ್ನೂ ಕಿರೀಟವನ್ನೂ ಕಂಡು ವಾನರ
ಸೇನೆಯು ಭಯಗೊಂಡಿತು. ಈತನು ಯಾರು? ಎಂಬುದನ್ನು ಅರಿತುಕೊಳ್ಳುವ
ಉತ್ಸುಕತೆಯು ರಾಮನಿಗೆ ಹುಟ್ಟಿತು. ಆಗ ವಿಭೀಷಣನನ್ನು ಕೇಳಿದಾಗ ಆತನು
ಇಂತೆಂದನು:
“ಇವನು ಯಮ ಮತ್ತು ಇಂದ್ರನನ್ನು ಯುದ್ಧದಲ್ಲಿ ಪರಾಭವಗೊಳಿಸಿದ
ವಿಶ್ರವಸನ ಪ್ರತಾಪಶಾಲಿಯಾದ ಪುತ್ರ, ಕುಂಭಕರ್ಣನು; ಘನತೆಯಲ್ಲಿ ಈತನನ್ನು
ಮೀರಿಸಬಲ್ಲ ರಾಕ್ಷಸರಿಲ್ಲ. ಸಾವಿರಾರು ದೇವತೆಗಳನ್ನು, ದಾನವರನ್ನು ಯಕ್ಷ,
ಭುಜಂಗ, ರಾಕ್ಷಸ, ಗಂಧರ್ವ, ವಿದ್ಯಾಧರ, ಪನ್ನಗ ಇವರನ್ನು ಯುದ್ಧದಲ್ಲಿ
ಥಳಿಸಿದ್ದಾನೆ. ಉಗ್ರವಾದ ಕಣ್ಣುಗಳುಳ್ಳ ಈತನು ಕೈಯಲ್ಲಿ ಶೂಲವನ್ನು ಹಿಡಿದು
ಕೊಂಡಿರುತ್ತಾನೆ. ಈ ಪರಿಯ ಬಲಾಢ್ಯ ಕುಂಭಕರ್ಣನನ್ನು ವಧಿಸುವುದು
ದೇವತೆಗಳಿಗೂ ಸಾಧ್ಯವಾಗಿಲ್ಲ.”
ಪ್ರಕೃತ್ಯಾ ಹ್ಯೇಷ ತೇಜಸ್ವೀ ಕುಂಭಕರ್ಣೋ ಮಹಾಬಲಃ |
ಆನ್ಯೇಷಾಂ ರಾಕ್ಷಸೇಂದ್ರಾಣಾಂ ವರದಾನಕೃತಂ ಬಲಮ್ ‖೧೨‖