ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಸೇವಾಸಕ್ತರು, ಮಹಾಪ್ರಸ್ಥಾನ ಮುಂತಾದ ಸಾಧನೆಯಿಂದ ಪರಲೋಕವನ್ನು
ಇಚ್ಛಿಸಿ ದೇಹತ್ಯಾಗ ಮಾಡುವವರು, ಇವರಿಗೆಲ್ಲ ಯಾವ ಸದ್ಗತಿಯು
ದೊರಕುತ್ತದೆಯೋ ಆ ಗತಿಯನ್ನು ನೀನು ಪಡೆ! ನಮ್ಮ ಕುಲದಲ್ಲಿ ಹುಟ್ಟಿದಂಥ
ನಿನಗೆ ಎಂದಿಗೂ ದುರ್ಗತಿಯು ಬರಲಾರದು!”

೪. ಸ್ವರ್ಗಸ್ಥನಾದ ದಶರಥನ ಆಶೀರ್ವಾದಗಳು

ಯುದ್ಧಕಾಂಡ/೧೧೯

ಈ ಮೊದಲೇ ಸ್ವರ್ಗಸ್ಥನಾದ ದಶರಥನ ದರ್ಶನವನ್ನು ಮಹೇಶ್ವರನು
ರಾಮನಿಗೆ ಮಾಡಿಸಿದನು. ಆಗ ದಶರಥನಿಗೆ ಬಹಳ ಆನಂದವಾಯಿತು. “ಕಹೋಲ
ಎಂಬ ಬ್ರಾಹ್ಮಣನ ಪುತ್ರನು ತನ್ನ ತಂದೆಯನ್ನು ಉದ್ಧರಿಸಿದಂತೆ ಸತ್ಪುತ್ರನಾದ
ನೀನು ನನ್ನನ್ನು ಉದ್ಧರಿಸಿರುವೆ” ಎಂದು ದಶರಥನು ರಾಮನಿಗೆ ನುಡಿದನು.
ಕೈಕೇಯಿಯ ಕಟುವಾದ ಭಾಷಣ, ಅದರಿಂದ ರಾಮ ಲಕ್ಷ್ಮಣ ಸೀತೆಯರಿಗಾದ
ವನವಾಸ, ಆ ವಾಸದಲ್ಲಿ ಅವರು ಪಟ್ಟ ಕಷ್ಟ ಸಂಕಷ್ಟಗಳು ದಶರಥನನ್ನು
ಕೊರೆಯುತ್ತಿದ್ದವು. ಅದನ್ನೆಲ್ಲ ರಾಮನಿಗೆ ವಿವರಿಸಿ ಆತನು ರಾಮನಿಗೆ
ಆಶೀರ್ವದಿಸಿದನು.
ನಿವೃತ್ತ ವನವಾಸೋsಸಿ ಪ್ರತಿಜ್ಞಾ ಪೂರಿತಾ ತ್ವಯಾ |
ರಾವಣಂ ಚ ರಣೇ ಹತ್ವಾ ದೇವತಾಃ ಪರಿತೋಷಿತಾಃ ‖೨೩‖
ಕೈತಂ ಕರ್ಮ ಯಶಃ ಶ್ಲಾಘ್ಯಂ ಪ್ರಾಪ್ತಂ ತೇ ಶತ್ರುಸೂದನ |
ಭ್ರಾತೃಭಿಃ ಸಹ ರಾಜ್ಯಸ್ಥೋ ದೀರ್ಘಮಾಯುರವಾಪ್ನುಹಿ ‖೨೪‖


“ಈಗ ನಿನ್ನ ವನವಾಸವು ಪೂರ್ಣಗೊಂಡಿದೆ. ನೀನು ನಿನ್ನ ಪ್ರತಿಜ್ಞೆಯನ್ನು
ಪೂರ್ತಿಗೊಳಿಸಿರುವೆ. ಸಂಗ್ರಾಮದಲ್ಲಿ ರಾವಣನನ್ನು ಕೊಂದು ದೇವತೆಗಳಿಗೆ
ಸಂತೋಷವನ್ನುಂಟುಮಾಡಿರುವೆ. ಎಲೈ ಶತ್ರುನಾಶಕನೇ, ಪ್ರಶಂಸನೀಯ
ಕಾರ್ಯವನ್ನು ಮಾಡಿ ನೀನು ಕೀರ್ತಿಯನ್ನು ಪಡೆದಿರುವೆ. ರಾಜ್ಯಾರೂಢನಾದ
ನೀನು ಬಂಧುಬಾಂಧವರ ಸಮೇತ ದೀರ್ಘಾಯುವಾಗು!” ಆಗ ರಾಮನು
ದಶರಥನಿಗೆ ಕೈಕೇಯಿ ಹಾಗೂ ಭರತ ಇವರ ಮೇಲೆ ಕೃಪೆ ತೋರಬೇಕೆಂದು
ಕೇಳಿಕೊಂಡನು. ಆಗ ದಶರಥನು ಅದಕ್ಕೆ ಒಪ್ಪಿದನು. ಲಕ್ಷ್ಮಣನಿಗೆ ರಾಮನ
ಸೇವೆಯಲ್ಲಿರಬೇಕೆಂದು ಉಪದೇಶಿಸಿ ದಶರಥನು ಆತನಿಗೆ ಆಶೀರ್ವಾದವನ್ನು
ಕೊಟ್ಟನು.