ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಭಗನೆಂಬ ಋತ್ವಿಜನನ್ನು ಬಂಧಿಸಿಟ್ಟನು; ಹಾಗೂ ದಕ್ಷನಿಗೆ ಶಾಪವನ್ನಿತ್ತನು.
ರಾಮನ ಅಶ್ವಮೇಧ ಯಜ್ಞದ ಸಮಯಕ್ಕೆ ಈತನು ಹನುಮಾನನೊಡನೆ
ಕಾದಾಡಿದನೆಂದು ಪದ್ಮಪುರಾಣದ ಪಾತಾಲಖಂಡದಲ್ಲಿ ಹೇಳಲಾಗಿದೆ. ಈತನು
ರಾವಣನಿಗೆ ಶಾಪವನ್ನು ಕೊಟ್ಟಿದ್ದನು.

೬೨. ನರಾಂತಕ

ಇವನು ರಾವಣನ ಮಗನಾಗಿದ್ದು ಅಗ್ನಿಯಂತೆ ಪ್ರಖರನೂ, ಪರ್ವತಶಿಖರ
ಗಳೊಡನೆ ಸೆಣಸಾಡುವವನೂ ಆಗಿರುವನೆಂದು ವಿಭೀಷಣನು ರಾಮನಿಗೆ
ವಿವರಿಸುತ್ತಾನೆ. ಕುಂಭಕರ್ಣನು ಯುದ್ಧದಲ್ಲಿ ಮಡಿದನಂತರ ನರಾಂತಕನು
ಸಿಟ್ಟಿಗೆದ್ದು ರಣರಂಗಕ್ಕೆ ಇಳಿದನು. ತ್ರಿಶಿರನ ಭಾಷಣದಿಂದ ಸ್ಫೂರ್ತಿಗೊಂಡು
ಈತನು ವಾನರಸೈನ್ಯದಲ್ಲಿ ನುಗ್ಗಿ ಅವರನ್ನು ಸಂಹರಿಸಿದನು. ಅಂಗದನೊಡನೆ
ನಡೆದ ಯುದ್ಧದಲ್ಲಿ ಈತನು ಕೊಲ್ಲಲ್ಪಟ್ಟನು.

೬೩. ನಲ (ವಾನರ)

ಇವನು ವಿಶ್ವಕರ್ಮ ಮತ್ತು ಘೃತಾಚಿ ಎಂಬ ಅಪ್ಸರೆಯ ಮಗನು, ಋತು
ಧ್ವಜನೆಂಬ ಮುನಿಯ ಶಾಪದಿಂದ ಈತನಿಗೆ ವಾನರರೂಪವು ಬಂದಿತು. ಇವನು
ವಾನರರ ಸೇನೆಯಲ್ಲಿಯ ಪ್ರಮುಖರಲ್ಲಿ ಒಬ್ಬನಾಗಿದ್ದನು. ಇಷ್ಟವಿದ್ದ ವಸ್ತುಗಳನ್ನು
ತಕ್ಷಣ ನಿರ್ಮಿಸುವ ಶಕ್ತಿಯ ವರವನ್ನು ಈತನು ತನ್ನ ತಂದೆಯಿಂದ ಪಡೆದಿದ್ದನು.
ರಾಮನ ಆಜ್ಞೆಯನುಸಾರ ಇವನು ಸೇತುವೆಯನ್ನು ನಿರ್ಮಿಸಿದನು. ಲಂಕೆಯ
ಪ್ರಾಕಾರದಲ್ಲಿ ನುಗ್ಗಲು ಕಿಂಡಿಯನ್ನು ತೋಡುವದರಲ್ಲಿ ಇವನದು ಪ್ರಮುಖ
ಪಾತ್ರವಿತ್ತು. 'ನಿನ್ನ ಕೈಯಿಂದ ನೀರಿನಲ್ಲಿ ಬಿಡಲಾದ ಕಲ್ಲುಗಳು ತೇಲುವವು'
ಎಂಬ ವರವನ್ನು ಇವನು ಒಬ್ಬ ಬ್ರಾಹ್ಮಣನಿಂದ ಪಡೆದಿದ್ದನು. ಇದರಿಂದ ನಲನಿಗೆ
ಸೇತುವೆಯನ್ನು ಕಟ್ಟುವುದು ಸಾಧ್ಯವಾಯಿತು. ನಲನು ಪ್ರತಪನ, ಅಕಂಪನ,
ಪ್ರಹಸ್ತ ಮೊದಲಾದವರೊಡನೆ ಯುದ್ಧ ಮಾಡಿ ತನ್ನ ಶೌರ್ಯಸಾಹಸಗಳನ್ನು
ಪ್ರದರ್ಶಿಸಿದನು. ಅಶ್ವಮೇಧಯಜ್ಞದ ಕಾಲಕ್ಕೆ ಯಜ್ಞದ ಕುದುರೆಯನ್ನು ರಕ್ಷಿಸಲು
ಈತನು ಶತ್ರುಘ್ನನೊಡನೆ ಇದ್ದನು. ಇಂದ್ರಜಿತುವು ಇವನನ್ನು ಬಾಣಗಳಿಂದ
ಗಾಯಗೊಳಿಸಿದನು. ರಾಜ್ಯಾಭಿಷೇಕದ ಸಮಯಕ್ಕೆ ರಾಮನು ಇವನನ್ನು
ಸತ್ಕರಿಸಿದನು. ಕುಶ-ಲವರು ಇವನನ್ನು ಸೋಲಿಸಿದರು.