ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ದೇವತೆಗಳಿಗೆ ಪೀಡೆ ಕೊಟ್ಟರೆ ನೀನು ಕೂಡಲೇ ನಾಶಹೊಂದುವೆ!' ಎಂಬ
ಉಪದೇಶವನ್ನು ಪ್ರಹ್ಲಾದನು ಬಲಿರಾಜನಿಗೆ ಕೊಟ್ಟು, ನಂತರದ ಶಾಪವನ್ನು
ಕೊಟ್ಟಿದ್ದಾನೆ. ಬಲಿಯು ಬಹುಕಾಲದವರೆಗೆ ರಾಜ್ಯವನ್ನಾಳಿದನು. ದೇವದಾನವ
ರಲ್ಲಿಯ ಯುದ್ಧದಲ್ಲಿ ಇಂದ್ರನು ಎಸೆದ ವಜ್ರಾಯುಧದಿಂದ ಇವನು ಮಡಿದನು.
ಶುಕ್ರಾಚಾರ್ಯನ ಸ್ಪರ್ಶದಿಂದ ಮತ್ತು ಮಂತ್ರಬಲದಿಂದ ಬಲಿಯು ಪುನಃ
ಜೀವಿತನಾದನು. ಶುಕ್ರಾಚಾರ್ಯನು ಈತನಿಂದ ವಿಶ್ವಜಿತಯಜ್ಞವನ್ನು ಮಾಡಿಸಿದನು.
ಆಗ ಯಜ್ಞನಾರಾಯಣನು ಪ್ರಸನ್ನನಾಗಿ, ಬಲಿಗೆ ಇಂದ್ರನಂತಹ ದಿವ್ಯರಥವನ್ನೂ,
ಹೇರಳ ಸುವರ್ಣವನ್ನೂ, ಧನುಸ್ಸನ್ನೂ, ಅಕ್ಷಯ ಬತ್ತಳಿಕೆಯನ್ನೂ, ದಿವ್ಯ
ಕವಚಗಳನ್ನೂ ಕೊಟ್ಟನು. ಪ್ರಹ್ಲಾದನು ಬಲಿಗೆ ಎಂದೂ ಬಡದೇ ಇರುವ
ಹೂಮಾಲೆಯನ್ನೂ ಶುಕ್ರಾಚಾರ್ಯನು ದಿವ್ಯಶಂಖವನ್ನೂ ಮತ್ತು ಬ್ರಹ್ಮದೇವನು
ಒಂದು ಕೊರಳ ಮಾಲೆಯನ್ನೂ ಕೊಟ್ಟರು. ಬಲಿಯು ಸ್ವರ್ಗವನ್ನು ಪುನಃ
ಗೆದ್ದುಕೊಂಡನು; ನೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು.
ನರ್ಮದಾನದಿಯ ಉತ್ತರತೀರದ ಭೃಗುಕಚ್ಛ ಎಂಬ ಪ್ರದೇಶದಲ್ಲಿ ಬಲಿಯ
ಕೊನೆಯ ಅಶ್ವಮೇಧಯಜ್ಞ ನಡೆದಾಗ, ವಿಷ್ಣುವು ವಾಮನರೂಪವನ್ನು ತಾಳಿ
ಬಲಿಯ ಬಳಿ ಬಂದು, ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ
ಬೇಡಿದನು. ಬಂದವನು ಶ್ರೀವಿಷ್ಣು ಎಂದು ಶುಕ್ರನು ಅರಿತಿದ್ದನು; ಭೂಮಿಯನ್ನು
ಕೊಡಕೂಡದೆಂದು ಬಲಿಗೆ ಸೂಚಿಸಿದನು. ಆದರೆ, ಬಂದ ಅತಿಥಿಯನ್ನು
ಬರಿಗೈಯಿಂದ ಕಳುಹಬಾರದೆಂಬ ವ್ರತವು ಬಲಿಯದಿತ್ತು. ಹೀಗಿದ್ದುದರಿಂದ
ಶುಕ್ರಾಚಾರ್ಯನ ಸಲಹೆಯನ್ನು ಬಲಿಯು ಮನ್ನಿಸಲಿಲ್ಲ. ಆಗ ಕ್ರೋಧಗೊಂಡ
ಶುಕ್ರಾಚಾರ್ಯನು ಇವನಿಗೆ ಶಾಪವನ್ನಿತ್ತನು. ವಾಮನನು ವಿಶಾಲ ರೂಪವನ್ನು
ಧರಿಸಿ ಎರಡೇ ಹೆಜ್ಜೆಗಳಲ್ಲಿ ಸಮಸ್ತ ಬ್ರಹ್ಮಾಂಡವನ್ನೇ ವ್ಯಾಪಿಸಿ, ಮೂರನೆಯ
ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ಮೆಟ್ಟಿದನು.
ಬಲಿರಾಜನಿಗೆ ಬ್ರಹ್ಮದೇವನು ಅನೇಕ ವರಗಳನ್ನು ಕೊಟ್ಟಿದ್ದನೆಂಬ ಉಲ್ಲೇಖವು
ಹರಿವಂಶ ಮತ್ತು ಮತ್ಸ್ಯಪುರಾಣಗಳಲ್ಲಿದೆ. ಬಲಿಯ ರಾಜ್ಯದಲ್ಲಿ ದೇವತೆಗಳು,
ಬ್ರಾಹ್ಮಣರು ಮತ್ತು ಭೂಮಿ ಇವರೆಲ್ಲರಿಗೂ ವಿಲಕ್ಷಣ ತೊಂದರೆ ಯಾಗಹತ್ತಿದ್ದರಿಂದ
ದೇವತೆಗಳೆಲ್ಲರೂ ವಿಷ್ಣುವಿಗೆ ಶರಣು ಹೋದರು. ವಿಷ್ಣುವು ಬಲಿಯನ್ನು
ನಿರೋಧಿಸಲು ವಾಮನಾವತಾರವನ್ನು ತಳೆದನು.