ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೮೨. ಬ್ರಹ್ಮನ್, ಬ್ರಹ್ಮದೇವ

ಬ್ರಹ್ಮನ್ ಎಂದರೆ ಸೃಷ್ಟಿಯ ಆದಿತತ್ತ್ವವೆಂದು ಪರಿಗಣಿಸಲಾಗುತ್ತದೆ. ಈತನು
ಸಕಲಸೃಷ್ಟಿಯು ನಿರ್ಮಾಣಗೊಳ್ಳುವ ಮೊದಲೇ ಅವತರಿಸಿದವನು. ಭಗವಂತನು
ಸೃಷ್ಟಿಸಿದ ಪೃಥ್ವಿಯ ರೂಪದ ಕಮಲದಲ್ಲಿ ಬ್ರಹ್ಮನು ಹುಟ್ಟಿದನೆಂದು ಮತ್ಸ್ಯ
ಪುರಾಣದಲ್ಲಿದೆ. ವಿಷ್ಣುವು ಸೃಷ್ಟಿಯ ಬಗ್ಗೆ ವಿಚಾರ ಮಾಡುತ್ತಿದ್ದಾಗ ಯಾವ
ಅಹಂಕಾರವು ಮೂಡಿತೋ ಅದರಿಂದ ಬ್ರಹ್ಮದ ಉತ್ಪತ್ತಿಯಾಯಿತೆಂದು
ಮಹಾಭಾರತದಲ್ಲಿದೆ. ವಿಶ್ವದ ಶಕ್ತಿ ಎಂದರೆ ಭಗವಂತ; ಆತನೆಂದರೆ ಬ್ರಹ್ಮ
ಸ್ಕಂದ ಪುರಾಣದಂತೆ, ಒಂದು ಬೃಹದಾಕಾರದ ಮೊಟ್ಟೆಯು ನಿರ್ಮಾಣ ಗೊಂಡಿತು;
ಅದರಿಂದ ಬ್ರಹ್ಮನಾದನು ಎಂದಿದೆ. ಇಂಥ ಬ್ರಹ್ಮನು ಮೊಟ್ಟ ಮೊದಲು
ತಮೋಗುಣವನ್ನು ಹೊಂದಿದ ಪ್ರಜೆಗಳನ್ನು ನಿರ್ಮಿಸಿ ನಂತರ ರಜೋಗುಣಯುಕ್ತ
ಮತ್ತು ಆಮೇಲೆ ಸತ್ವಸಂಪನ್ನರನ್ನು ನಿರ್ಮಿಸಿದನು. ಬ್ರಹ್ಮನು ಎಲ್ಲ ವೇದ-
ವೇದಾಂತಗಳ ಅಧಿಷ್ಠಾನವಿದ್ದು ಈತನಿಂದಲೇ ಗಾಯತ್ರಿಯು ಪ್ರಕಟಳಾದಳು.
ಈ ಈರ್ವರೂ ಸಾಕ್ಷಾದಾಕಾರಸಹಿತವಾಗಿ ಇಲ್ಲವೆ ಅಮೂರ್ತ ರೂಪವಾಗಿಯೂ
ಇರಬಲ್ಲರು. ಗಾಯತ್ರಿಯು ಬ್ರಹ್ಮನಿಂದ ಎಂದೂ ದೂರವಾಗ ಲಾರಳು. ಬ್ರಹ್ಮನು
ವೇದರಾಶಿಯಾಗಿದ್ದು ಸಾವಿತ್ರಿಯು ಅದರಲ್ಲಿ ವಿರಾಜಿಸಿದ್ದಾಳೆ. ಈ ಕಾರಣದಿಂದ
ಬ್ರಹ್ಮನಿಗೆ ಸಾವಿತ್ರೀಗಮನದ ದೋಷವಿಲ್ಲವೆಂದು ಮತ್ಸ್ಯ ಪುರಾಣದ ಮತವಿದೆ.
ಬ್ರಹ್ಮನು ಮೂಲತಃ ಒಂದೇ ಮುಖದವನಿದ್ದರೂ ಇವನನ್ನು ಚತುರ್ಮುಖ
ನೆಂದು ವರ್ಣಿಸುತ್ತಾರೆ. ಇವನು ತನ್ನ ಅವಯವಗಳಿಂದ ಶತರೂಪಾ
ಎಂಬ ಲಾವಣ್ಯವತಿಯಾದ ಸ್ತ್ರೀಯನ್ನು ಸೃಷ್ಟಿಸಿದನು. ಇವಳು ಬ್ರಹ್ಮನಿಗೆ
ಪ್ರದಕ್ಷಿಣೆ ಹಾಕಲು ಪ್ರಾರಂಭಿಸಿದಾಗ ಬ್ರಹ್ಮನ ಸುತ್ತಲೂ ಮಾನಸಪುತ್ರರು
ಕುಳಿತುಕೊಂಡಿದ್ದ ಕಾರಣ ಅವಳತ್ತ ನೋಡಲು ಬ್ರಹ್ಮನಿಗೆ ಸಂಕೋಚವೆನಿಸಿತು;
ಆದರೆ ಶತರೂಪೆಯತ್ತ ನೋಡುವ ಆಸೆಯನ್ನು ತಡೆಯುವದು ಅಸಾಧ್ಯವಾಯಿತು.
ಆಗ ಇವನು ನಾಲ್ಕೂ ದಿಕ್ಕುಗಳತ್ತ ಒಂದೊಂದು ಮುಖವನ್ನು ನಿರ್ಮಿಸಿಕೊಂಡನು.
ನಂತರ ಆ ಶತರೂಪೆಯು ಆಕಾಶದತ್ತ ಮೇಲಕ್ಕೆ ಹೊರಟಾಗ ಈ ನಾಲ್ಕು
ಮುಖಗಳ ಮೇಲೆ ಐದನೆಯ ಮುಖವೊಂದು ಉದ್ಭವಿಸಿತು. ಆ ಮುಖವನ್ನು
ಶಂಕರನು ಕತ್ತರಿಸಿಹಾಕಿದನು. ಶತರೂಪೆಯತ್ತ ನೋಡಿದ ಕಾರಣ ಪುತ್ರಪ್ರಾಪ್ತಿಗಾಗಿ
ಇವನು ಆಚರಿಸಿದ ತಪಸ್ಸು ನಷ್ಟವಾಯಿತು. ರುದ್ರನು ತನ್ನ ಕನ್ಯೆಯಾದ ಸಂಧ್ಯಾಳಿಂದ
ಬ್ರಹ್ಮನನ್ನು ಮೋಹಗೊಳಿಸಿದನು; ನಂತರ ಬ್ರಹ್ಮನ ಮಕ್ಕಳ ಮುಂದೆ ಅವನನ್ನು
ಅವಮಾನಿತನನ್ನಾಗಿ ಮಾಡಿದನು. ಆಗ ಬ್ರಹ್ಮನು ಶಂಕರನನ್ನು ಮೋಹಗೊಳಿಸುವ