ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಇರುತ್ತದೆ. ಸದಿಚ್ಛೆಯ ಉದ್ಗಾರ ಸ್ವಯಂಸ್ಫೂರ್ತ ವಾಗಿರುವುದರಿಂದ ಅಯಾಚಿತವಿರುತ್ತದೆ.

ಶಾಪ ಅಥವಾ ವರಗಳನ್ನು ಕೊಡುವ ಕ್ರಿಯೆಯಲ್ಲಿ ತೀವ್ರವಾದ ಭಾವೋದ್ರೇಕ ವಿರುತ್ತದೆ. ಶಾಪ ಹಾಗೂ ವರ, ಇವೆರಡರಲ್ಲಿಯ ಭಾವನೆಯ ಸ್ವರೂಪವು, ಅದರ ವೇಗ, ಉದ್ಗಾರದ ರೀತಿ ಇವೆಲ್ಲ ತೀರ ಭಿನ್ನವಾಗಿರುತ್ತವೆ. ಶಾಪವು ಕೋಪದಿಂದ ಉದ್ಭವಿಸುತ್ತಿದ್ದು, ಶಾಪ ಕೊಡುವವನು ಪ್ರಕ್ಷುಬ್ಧಗೊಳ್ಳೂತ್ತಾನೆ. ಇದರಿಂದ ಅವನು ತನ್ನ ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾನೆ. ಕೋಪವು ಹೆಚ್ಚಾದಷ್ಟೂ ಮನಸ್ಸಿನ ನಿಯಂತ್ರಣ ಸಡಿಲಾಗುತ್ತದೆ. ಕೋಪಗೊಂಡಾಗ ನಾವು ಆಡುವುದೇನು? ಮಾಡುತ್ತಿರುವದೇನು? ಎಂಬುದರ ಪ್ರಜ್ಞೆ ಇರುವುದಿಲ್ಲ.

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮ: |

ಭ.ಗೀ. ೨/೬೩

ಕ್ರೋಧವು ಹೆಚ್ಚಾದಂತೆ ತಾರತಮ್ಯಗಳ ಪರಿವೆ ಉಳಿಯುವುದಿಲ್ಲ. ಈ ನಂತರ ಸ್ಮೃತಿಭ್ರಂಶವಾಗುತ್ತದೆ. ಶಬ್ದಗಳ ಆವೇಗ ತೀವ್ರಗೊಳ್ಳುತ್ತದೆ. ಆಡಿದ ನುಡಿಗಳ ಪರಿಣಾಮದತ್ತ ಗಮನವಿರುವುದಿಲ್ಲ. ಕೋಪದಿಂದ ತಾಳ್ಮೆ ತಪ್ಪಿ ಸಾರಾಸಾರ ವಿಚಾರ ಇಲ್ಲದಾಗುತ್ತದೆ. ಶಬ್ದಗಳು ಬಾಯಿಯಿಂದ ಸಿಡಿದುಬರುತ್ತವೆ.

ವರವನ್ನು ಕೊಡುವಾಗ ಮನಸ್ಸು ನಿಚ್ಚಳವಾಗಿ, ನಿರ್ಮಲವಾಗಿ, ಸಂತೋಷಭರಿತವಾಗಿರುತ್ತದೆ. ನುಡಿಯುವ ಮುನ್ನ ಪರಿಣಾಮಗಳ ಮುಂದೋಲೋಚನೆ ಸಾಧ್ಯವಿರುತ್ತದೆ. ಮನೋಭಾವವು ನಿಯಂತ್ರಣದಲ್ಲಿರುತ್ತದೆ. ಶಾಪವನ್ನುದ್ಗರಿಸುವಾಗಿನ ಮನೋಭಾವ ಮತ್ತು ವರ ಕೊಡುವ ಸಮಯದಲ್ಲಿಯ ಮನೋಭಾವ ಇವುಗಳ ಸ್ವರೂಪದಲ್ಲಿ ತುಂಬಾ ಭಿನ್ನತೆಯಿದೆ. ಅಯಾಚಿತ ವರಗಳನ್ನು ವಿಚಾರಮಾಡಿ ಕೊಡಲು ಸಾಧ್ಯವಿದೆ. ರಾಕ್ಷಸರಿಗೆ ವರಗಳನ್ನು ಕೊಡುವಾಗ ಬ್ರಹ್ಮನ ಹಿಡಿತ ತಪ್ಪಿದಂತೆ ತೋರಿಬರುತ್ತದೆ. ಬ್ರಹ್ಮದೇವನು ಕುಂಭಕರ್ಣನಿಗೆ ವರವನ್ನು ಕೊಡುವ ಮೊದಲು, ಬೇರೆ ದೇವತೆಗಳು “ವರವನ್ನು ಕೊಡಬೇಡಿ!” ಎಂದು ಬ್ರಹ್ಮನನ್ನು ಪ್ರಾರ್ಥಿಸಿದ್ದರು. ರಾವಣನಿಗೆ ವರಗಳನ್ನು ಕೊಟ್ಟ ನಂತರ, ಆತನಿಂದ ಎಲ್ಲರಿಗೂ ವಿಲಕ್ಷಣ ಉಪದ್ರವ ಶುರುವಾಯಿತು. ಈ ಆತಂಕದಿಂದ ಪಾರಾಗುವ ಮಾರ್ಗವನ್ನು ಕಂಡುಹಿಡಿಯಬೇಕಾದ ಪರಿಸ್ಥಿತಿಯೊದಗಿತು.

ಶಿಕ್ಷೆಯನ್ನು ವಿಧಿಸುವ ಉದ್ದೇಶ ಶಾಪದಲ್ಲಿದೆ; ಶುಭದ ಉದ್ದೇಶ ವರದಲ್ಲಿ ಇರುತ್ತದೆ. ವರದಲ್ಲಿಯ ಶಬ್ದಗಳ ಸಾಮರ್ಥ್ಯ ಹೆಚ್ಚಿರುತ್ತದೆ; ಶಾಪದಲ್ಲಿ ಇಚ್ಛೆಯ