ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೬೭


ಹೋಗಿದ್ದನು. ಇಂದ್ರನು ಸಹ ಅದೇ ಉದ್ದೇಶದಿಂದ ಅಲ್ಲಿಗೆ ಬಂದಿದ್ದನು.
ಇಂದ್ರನಿಗೆ ಆತ್ಮಸಾಕ್ಷಾತ್ಕಾರವಾಯಿತು; ವಿರೋಚನನಿಗೆ ಆಗಲಿಲ್ಲ. ವಿರೋಚನನು
ತನ್ನದೇ ಒಂದು ಸಿದ್ಧಾಂತವನ್ನು ಮಂಡಿಸಿ ಅದನ್ನೇ ತನ್ನ ಅನುಯಾಯಿಗಳಲ್ಲಿ
ಪ್ರಚಾರಗೊಳಿಸಿದನು.
ಸೂರ್ಯನನ್ನು ಆರಾಧಿಸಿ ವಿರೋಚನನು ಒಂದು ಮುಕುಟವನ್ನು ಪಡೆದು
ಕೊಂಡನು. 'ಈ ಮುಕುಟವು ಇನ್ನೊಬ್ಬರ ಕೈಸೇರಬಾರದು! ಹಾಗೆ ಆದಲ್ಲಿ ನಿನ್ನ
ನಾಶವಾಗುವದು!' ಎಂದು ಸೂರ್ಯನು ಈ ಮುಕುಟವನ್ನು ಕೊಡುವಾಗ
ಹೇಳಿದ್ದನು. ವಿರೋಚನನು ಜನರನ್ನು ಪೀಡಿಸಹತ್ತಿದಾಗ ವಿಷ್ಣು ಸ್ತ್ರೀರೂಪವನ್ನು
ಧರಿಸಿ ಈತನನ್ನು ಮೋಹಗೊಳಿಸಿದನು. ಈತನ ಮುಕುಟವನ್ನು ವಶಪಡಿಸಿಕೊಂಡು
ವಿರೋಚನನನ್ನು ನಾಶಗೊಳಿಸಿದನೆಂದು ಗಣೇಶಪುರಾಣದಲ್ಲಿದೆ. ವಿರೋಚನನು
ಇಂದ್ರನನ್ನು ನಾಶಗೊಳಿಸಲೆಂದು ಅಣಿಯಾದಾಗ ತಾರಕಾಮಯ ಯುದ್ಧದಲ್ಲಿ
ಇಂದ್ರನಿಂದ ಈತನ ನಾಶವಾಯಿತು. ಕುಂಭ, ನಿಕುಂಭರು ಈತನ
ತಮ್ಮಂದಿರಾಗಿದ್ದರು.

೧೨೩. ವಿಶ್ರವ (ವಿಶ್ರವಸ್)

ವಿಶ್ರವನು ಬ್ರಹ್ಮನ ಮಾನಸಪುತ್ರನಾದ, ನಾಲ್ಕನೆಯ ಪ್ರಜಾಪತಿಯಾದ
ಪುಲಸ್ತ್ಯನ ಮಾನಸಪುತ್ರನಾಗಿದ್ದನು (ಸುಂದರಕಾಂಡ, ೨೩/೬-೭). ತೃಣಬಿಂದು
ರಾಜನ ಮಗಳಿಗೆ ಪುಲಸ್ತ್ಯನಿಂದ ಜನಿಸಿದ ಪುತ್ರನಾಗಿದ್ದನು. ಪುಲಸ್ತ್ಯನು
ವೇದಾಧ್ಯಯನವನ್ನು ಮಾಡುತ್ತಿದ್ದಾಗ ವಿಶ್ರವನ ತಾಯಿಯು ವೇದವನ್ನು ಕೇಳಿದ್ದಳು.
ಆಗ ವಿಶ್ರವ ಗರ್ಭದಲ್ಲಿದ್ದನು. ಈತನು ಹುಟ್ಟಿದ ನಂತರ 'ವಿಶ್ರವ' ಎಂದು
ನಾಮಕರಣವಾಯಿತು (ಉತ್ತರಕಾಂಡ, ೨/೩೧-೩೨). ಈತನು ಶ್ರುತಿವಂತನೂ,
ಸಮದರ್ಶಿಯೂ, ವ್ರತಸ್ಥನೂ ಆದ ಮುನಿಯಾಗಿದ್ದನು. ಭರದ್ವಾಜನ ಕನ್ಯೆಯಾದ
ದೇವವರ್ಣಿನಿ ಇವನ ಪತ್ನಿಯಾಗಿದ್ದಳು. ಅವಳಿಂದ ಸರ್ವಗುಣಸಂಪನ್ನನಾದ,
ಧರ್ಮಜ್ಞನಾದ ವೈಶ್ರವಣ ಎಂಬ ಪುತ್ರನನ್ನು ಈತನು ಪಡೆದನು. ಸುಮಾಲಿ
ರಾಕ್ಷಸನ ಕನ್ಯೆಯಾದ ಕೈಕಸಿಯು ಇವನನ್ನು ಮನಸಾರೆ ಮದುವೆಯಾದಳು.
ಸಾಯಂಕಾಲದಲ್ಲಿ ವಿಶ್ರವನು ಅಗ್ನಿಯಲ್ಲಿ ಹವನ ನಡೆಸಿದ ಕ್ರೂರಗಳಿಗೆಯಲ್ಲಿ
ಇವಳು ವಿಶ್ರವನಿಗೆ ಸಂಭೋಗದ ಇಚ್ಛೆಯನ್ನು ವ್ಯಕ್ತಮಾಡಿದಳು. ಈ ಕಾರಣದಿಂದ
ಇವಳಿಗೆ ರಾವಣ, ಕುಂಭಕರ್ಣ, ಶೂರ್ಪನಖಿ ಮೊದಲಾದ ಕ್ರೂರ ಮಕ್ಕಳು
ಹುಟ್ಟಿದರು. ಕೈಕಸಿಯ ಪ್ರಾರ್ಥನೆಯಂತೆ ಕೊನೆಯ ಪುತ್ರನಾದ ವಿಭೀಷಣನು