ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೭. ಹನುಮನನ ಇಷ್ಟಾರ್ಥಪೂರ್ತಿ

ಉತ್ತರಕಾಂಡ/೪೦

ರಾಮನ ರಾಜ್ಯಾಭಿಷೇಕವಾದ ನಂತರ ಆತನು ಎಲ್ಲ ಅತಿಥಿಗಳನ್ನು
ಯೋಗ್ಯವಾಗಿ ಸತ್ಕರಿಸಿ ಅವರನ್ನು ಬೀಳ್ಕೊಟ್ಟನು. ವಾನರರೆಲ್ಲರ ಮಾನಸನ್ಮಾನಗಳು
ಪೂರ್ತಿಯಾದ ನಂತರ ಹನುಮಾನನು ರಾಮನನ್ನು ಕುರಿತು,
'ಹೇ ರಾಜನೆ, ನಿನ್ನಲ್ಲಿ ಸದಾಕಾಲವೂ ನನ್ನ ಅಪಾರಪ್ರೀತಿವಿಶ್ವಾಗಳಿರಲಿ!
ನನ್ನ ಭಕ್ತಿಯು ಅಚ್ಚಳಿಯದೇ ಉಳಿಯಲಿ. ನನ್ನ ಮನಸ್ಸಿನ ಒಲವು ನಿನ್ನಿಂದ
ವಿಚಲಿತವಾಗಬಾರದು. ಹೇ ವೀರನೇ, ಭೂಲೋಕದಲ್ಲಿ ರಾಮಕಥೆಯು
ಉಳಿದಿರುವವರೆಗೆ ನನ್ನ ಪ್ರಾಣವು ನನ್ನ ದೇಹದಲ್ಲಿರಲಿ. ಇದರಲ್ಲಿ ಸಂಶಯವಿರ
ಬಾರದು. ಎಲೈ ರಘುನಂದನನೇ. ಈ ನಿನ್ನ ದಿವ್ಯಚರಿತ್ರೆಯನ್ನು ನನಗೆ ಅಪ್ಸರೆಯರು
ನಿರೂಪಿಸಲಿ. ನಾನು ನಿನ್ನ ಚರಿತ್ರಾಮೃತವನ್ನು ಸೇವಿಸಿ ನಿನ್ನ ದರ್ಶನದ ಇಚ್ಛೆಯನ್ನು
ಪೂರೈಸಿಕೊಳ್ಳುವೆ' ಎಂದು ನುಡಿದನು.
ಆಗ ರಾಮನು ಸಿಂಹಾಸನದಿಂದ ಎದ್ದು ಹನುಮಾನನನ್ನು ಆಲಿಂಗಿಸಿದನು.
ಏವಮೇತತ್ಕಪಿಶ್ರೇಷ್ಠ ಭವಿತಾ ನಾತ್ರ ಸಂಶಯಃ |
ಚರಿಷ್ಯತಿ ಕಥಾ ಯಾವದೇಷಾ ಲೋಕೇ ಚ ಮಾಮಿಕಾ ‖೨೧‖
ತಾವತ್ತೇ ಭವಿತಾ ಕೀರ್ತಿಃ ಶರೀರೇsಪ್ಯಸವಸ್ತಥಾ |
ಲೋಕಾ ಹಿ ಯಾವತ್ಸ್ಥಾಸ್ಯಂತಿ ತಾವತ್ಸ್ಯಾಸ್ಯಂತಿ ಮೇ ಕಥಾಃ ‖೨೨‖

ರಾಮನು ಹನುಮಾನನಿಗೆ 'ಎಲೈ ವಾನರಶ್ರೇಷ್ಠನೇ, ಎಲ್ಲವೂ ನಿನ್ನ ಇಷ್ಟದಂತೆ
ಆಗುವದು; ಇದರಲ್ಲಿ ಸಂದೇಹ ಬೇಡ. ಈ ನನ್ನ ಕಥೆಯು ಪ್ರಪಂಚದಲ್ಲಿರುವವರೆಗೆ
ನೀನು ಕೀರ್ತಿಯುಳ್ಳವನಾಗಿ ಜೀವಿಸಿರುವೆ. ಭೂಲೋಕವು ಇರುವವರೆಗೆ ನನ್ನ
ಚರಿತ್ರೆಯು ಉಳಿಯುವದು' ಎಂದು ನುಡಿದು ರಾಮನು ವೈಢೂರ್ಯಗಳಿಂದ
ಥಳಥಳಿಸುತ್ತಿದ್ದ, ಚಂದ್ರಪ್ರಭೆಯಂತೆ ಕಾಂತಿಮಯವಾದ ತನ್ನ ಕೊರಳಲ್ಲಿಯ
ಹಾರವನ್ನು ಹನುಮಾನನ ಕೊರಳಿಗೆ ಹಾಕಿದನು.
ಹನುಮಾನನು ವ್ಯಕ್ತಪಡಿಸಿದ ಇಚ್ಛೆಯನ್ನು ರಾಮನು ಪೂರ್ತಿಗೊಳಿಸಿದ
ಸಂಗತಿಯು ನಿಜವಿದ್ದರೂ ಅದು ಆಶೀರ್ವಾದದಂತೆ ಇದೆ. ಅದನ್ನು ವರವೆಂದು
ಹೇಳಲಾಗುವದಿಲ್ಲ. ವಾಲ್ಮೀಕಿಯು 'ವರ' ಎಂಬ ಶಬ್ದವನ್ನು ಉಪಯೋಗಿಸಿಲ್ಲ.
ಅದಲ್ಲದೇ ಕೊಟ್ಟ ಕೊರಳಿನ ಹಾರವು ಒಂದು ಅನುಗ್ರಹವಾಗಿಯೇ ಹೊರತು
ವರವಲ್ಲ.