ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೩೭

ಬಿನ್ನಹವನ್ನು ಲಕ್ಷ್ಮಣನು ಮನ್ನಿಸಿದ ಕಾರಣ ಶಾಪ ಕೊಡುವ ಪ್ರಸಂಗ ಉಂಟಾಗಲಿಲ್ಲ. ತನ್ನ ತಂದೆಯು ದಶರಥ ರಾಜನಿಗೆ ಶಾಪ ಕೊಡಬಹುದೆಂಬ ಭೀತಿಯು ಶ್ರವಣ ಕುಮಾರನಿಗೆ ಉಂಟಾಯಿತು. ತಮಗಿದ್ದ ಒಬ್ಬನೇ ಮಗನ ಸಾವಿನ ವಾರ್ತೆಯನ್ನು ಕೇಳಿ ಶ್ರವಣಕುಮಾರನ ತಂದೆಯು ಶಾಪ ಕೊಡಬಹುದಿತ್ತು; ಈ ಶಾಪವು ದಶರಥನಿಗೆ ಬರಬಾರದೆಂದು ಇಚ್ಚಿಸಿ ಒಂದು ಉಪಾಯವನ್ನು ಶ್ರವಣನು ಸೂಚಿಸಿದನು.


        ಪಿತುಸ್ತ್ವಮೇವ ಮೇ ಗತ್ವಾ ಶೀಘ್ರಡೂಚಕ್ಷ ರಾಘವ ||೪೩||
        ತಂ ಪ್ರಸಾದಯ ಗತ್ವಾಂ ತ್ವಂ ನ ತ್ವಾಂ ಸಂಕುಪಿತಃ ತಪೇತ್ ||೪೫||

“ಹೇ ರಘುವಂಶಜನೇ, ಕೂಡಲೇ ನೀನು ನನ್ನ ತಂದೆಯ ಬಳಿ ಹೋಗಿ ಈ ಸುದ್ದಿಯನ್ನು ತಿಳಿಸು! ದುಃಖಕೋಪಗಳಿಂದ ಶಾಪವನ್ನು ನುಡಿಯದಂತೆ ಆತನನ್ನು ಮನ್ನಿಸು.”೧೬

ಪ್ರತಿಶಾಪ

ಶಾಪ ಕೊಡಲು ಅನೇಕ ಕಾರಣಗಳಿರಬಹುದು; ಒಂದು ಶಾಪವು ಇನ್ನೊಂದಕ್ಕೆ ಮೂಲ ಕಾರಣವಾಗಬಹುದು. ಶಾಪಕ್ಕೆ ಪ್ರತ್ಯುತ್ತರವಾಗಿ ಕೊಟ್ಟ ಶಾಪವೆಂದರೆ ಪ್ರತಿಶಾಪ! ಈ ರೀತಿ ಪ್ರತಿಶಾಪಗಳನ್ನು ಕೊಡುವ ಸಂದರ್ಭಗಳು ಎರಡಾವರ್ತಿ ರಾಮಾಯಣದಲ್ಲಿ ಬಂದಿವೆ. ಒಂದು ಸಂದರ್ಭದಲ್ಲಿ ಪ್ರತಿಶಾಪವನ್ನು ಕೊಡಲಾಗಿದೆ; ಎರಡನೇ ಪ್ರಸಂಗದಲ್ಲಿ ಅದನ್ನು ತ್ಯಜಿಸಲಾಗಿದೆ. ವಸಿಷ್ಠನು ಕೊಟ್ಟ ಶಾಪದಿಂದ ಈ ಎರಡು ಪ್ರಸಂಗಗಳು ಉಂಟಾಗಿವೆ. ಬ್ರಹ್ಮರ್ಷಿಶ್ರೇಷ್ಠ ವಸಿಷ್ಠ ಋಷಿಗಳಿಗೆ ನಿಮಿರಾಜನು ತನ್ನ ದೀರ್ಘಯಾಗದ ಪೌರೋಹಿತ್ಯವನ್ನು ಮೊದಲು ಕೊಟ್ಟಿದ್ದನು. ವಸಿಷ್ಠರು, ಈ ಮೊದಲೇ ಇಂದ್ರನ ಪೌರೋಹಿತ್ಯವನ್ನು ಸ್ವೀಕರಿಸಿದ್ದುದರಿಂದ ಕೂಡಲೇ ನಿಮಿರಾಜನಿಗೆ ತಮ್ಮ ಒಪ್ಪಿಗೆಯನ್ನು ಕೊಡುವಂತಿರಲಿಲ್ಲ. ಅವರು ತುಸು ಸಮಯ ಕಾಯಬೇಕೆಂದು ನಿಮಿರಾಜನಿಗೆ ತಿಳಿಸಿದರು. ಆಗ ನಿಮಿರಾಜನು ಗೌತಮರಿಂದ ತನ್ನ ಯಾಗವನ್ನು ಪೂರೈಸಿದನು. ಈ ವೃತ್ತಾಂತವನ್ನು ಅರಿತ ವಸಿಷ್ಠರು ಕೋಪಗೊಂಡರು. ರಾಜನಿಗೆ ಈ ಬಗ್ಗೆ ವಿಚಾರಿಸಬೇಕೆಂದು ವಸಿಷ್ಠರು ಅಲ್ಲಿಗೆ ಬಂದಾಗ ರಾಜನು ನಿದ್ರಿಸುತ್ತಿದ್ದುದರಿಂದ

——————
೧೬. ಅಯೋಧ್ಯಾಕಾಂಡ, ೬೩.