ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೫೯

ಇಂದ್ರನು ದಿತಿಯ ಗರ್ಭವನ್ನು-ಗರ್ಭದಲ್ಲಿಯ ಪುತ್ರನನ್ನು ಏಳು ತುಂಡುಗಳಾಗಿ ತುಂಡರಿಸಿದನು.

ಬ್ರಹ್ಮದೇವನ ವರದಿಂದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿಪದವು ಲಭಿಸಿತು; ವೈಶ್ರವಣನು ಲೋಕಪಾಲಪದವನ್ನು ಹೊಂದಿದನು. ವಿಶ್ವಾಮಿತ್ರನ ಇಚ್ಛೆಯನ್ನು ವಸಿಷ್ಠನೂ ಒಪ್ಪಿದನು. ತ್ರಿಶಂಕು ಮತ್ತು ಶಂಬೂಕರ ದೇಹಸಹಿತವಾಗಿ ಸ್ವರ್ಗ ಸೇರುವ ಪ್ರಯತ್ನಗಳು ವಿಫಲಗೊಂಡವು. ಇಂದ್ರನ ವರದಿಂದ ಮಲದ-ಕರುಷ ಪ್ರದೇಶವು ಸಮೃದ್ಧವಾಯಿತು. ಶಬರಿಯು ಅಕ್ಷಯಲೋಕವನ್ನು ಸೇರಿ ಕೃತಾರ್ಥಳಾದಳು. ಕುರುಡನೊಬ್ಬನಿಗೆ ವರವಾಗಿ ರಾಜನ ನೇತ್ರಗಳು ದೊರೆತವು. ಸೂರ್ಯನ ಪ್ರಸಾದದಿಂದ ಮೇರು ಪರ್ವತವು ಸುವರ್ಣಮಯವಾಯಿತು. ವೈಶ್ರವಣನ ವರದಿಂದ 'ಕೃಕಲಾಸ' (ಓತಿಕೇತ)ಕ್ಕೆ ಚಿನ್ನದ ಕಾಂತಿ ದೊರೆಯಿತು. ಇಂದ್ರನು ಪ್ರಸನ್ನನಾದ್ದರಿಂದ ಹಂಸಕ್ಕೆ ನೊರೆಯಂಥ ಶುಭ್ರ ವರ್ಣವುಂಟಾಗಿ ಚಂದ್ರನ ಮೆರುಗು ಪ್ರಾಪ್ತವಾಯಿತು. ಯಮನ ವರದಿಂದ ಕಾಗೆಗೆ ಮರ್ಯಾದಿತ ರೂಪದಲ್ಲಿ, ಹತ್ಯೆ ಆಗದಂಥ ಸ್ಥಿತಿಯೊದಗಿತು. ವಸಿಷ್ಠನ ವರದಿಂದ ಕಲ್ಮಾಷ ಪಾದನು ಶಾಪಮುಕ್ತನಾದನು ಮತ್ತು ರಾಕ್ಷಸರಿಂದ ಅಸ್ತ್ರಬಂಧನದಿಂದ ಕಟ್ಟಿ ಹಾಕಲ್ಪಟ್ಟ ಹನುಮಂತನು ಬ್ರಹ್ಮನ ವರ ವಿದ್ದುದರಿಂದ ಆ ಬಂಧನದಿಂದ ಬಿಡಿಸಿಕೊಂಡನು.

ಸಾಮಾನ್ಯವಾಗಿ ಅಸಾಧ್ಯವೆಂದೆನಿಸುವ ಸಂಗತಿಗಳು ಮಾನವರ ಪ್ರಯತ್ನದಿಂದ ಸಾಧಿಸುವಂತಿರುವುದಿಲ್ಲ. ಇಂಥ ಸಂಗತಿಗಳು ವರಗಳಿಂದ ಸಾಧಿಸಲಾಗಿವೆ ಎಂಬುದರ ಉದಾಹರಣೆಗಳು ರಾಮಾಯಣದಲ್ಲಿವೆ. ಒಬ್ಬ ಋಷಿಯ ವರದಿಂದ ಕೈಕೇಯ ರಾಜನಿಗೆ ಪಶು-ಪಕ್ಷಿಗಳ ಭಾಷೆಯ ಜ್ಞಾನವುಂಟಾಯಿತು. ಮಯಾಸುರನು ಶಿಲ್ಪಶಾಸ್ತ್ರ ಪ್ರವೀಣನಾದನು. ಎದುರಿನಲ್ಲಿ ಬಂದ ಎಲ್ಲರನ್ನೂ ನುಂಗುವ ವಿಚಿತ್ರ ಸಾಮರ್ಥ್ಯವು ಸುರಸೆ ಎಂಬವಳಿಗೆ ದೊರಕಿತ್ತು. ಮರುಪ್ರದೇಶವು ಹೂವು ಹಣ್ಣುಗಳಿಂದ ಸುಗಂಧಿತವಾಯಿತು. ವರದಾನದಿಂದಲೇ ಇವೆಲ್ಲ ನಡೆದಿವೆ. ಇಂದ್ರನಿಂದ ಹವಿಷ್ಯಾನ್ನವು ಸೀತೆಗೆ ದೊರೆಯಿತು. ಸಕಲ ಪ್ರಾಣಿಗಳ ಕಣ್ಣುಗಳಲ್ಲಿ ವಾಸಿಸಬೇಕೆಂಬ ನಿಮಿರಾಜನ ಆಸೆ, ಬ್ರಹ್ಮಹತ್ಯೆಗೆ ಪ್ರಾಪ್ತವಾದ ನಾಲ್ಕು ಆಶ್ರಯಸ್ಥಾನಗಳು, ರಾಮನು ಹೋದಲ್ಲೆಲ್ಲ ಆತನನ್ನು ಹಿಂಬಾಲಿಸುವ ಅವಕಾಶ ಪ್ರಜೆಗಳಿಗೆ ದೊರೆತದ್ದು - ಇವೆಲ್ಲವು ವರಗಳ ಮುಖಾಂತರ ನಡೆದಿವೆ. ದೇವತೆಗಳ ವರಕ್ಕನುಸಾರವಾಗಿ ರಾಮನು ಮಾನವ ಅವತಾರದಲ್ಲಿ ಪೃಥ್ವಿಯನ್ನು ಆಳುವಂತಾದನು. ಪಾರ್ವತಿಯು ಕೊಟ್ಟ