ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೬೧

ಕಟ್ಟಳೆಯ ವರಗಳು

ಕಟ್ಟಳೆಯ ಶಾಪಗಳಿರುವಂತೆ ಕಟ್ಟಳೆಯ ವರಗಳಿದ್ದರೂ ಅವುಗಳ ಪ್ರಮಾಣವು ಅಲ್ಪವಾಗಿದೆ. ಈ ಬಗೆಯ ಉದಾಹರಣೆಗಳು ವಾಲ್ಮೀಕಿರಾಮಾಯಣದಲ್ಲಿ ಮೂರೇ ಮೂರು ಇವೆ. ಅಮೃತವನ್ನು ಪಡೆಯಲು ದೇವಾಸುರರ ಯುದ್ಧದಲ್ಲಿ ಅದಿತಿಯ ಮಕ್ಕಳಾದ ದೇವತೆಗಳು ದಿತಿಯ ಮಕ್ಕಳಾದ ಅಸುರರನ್ನು ಕೊಂದಾಗ ದಿತಿಯು ಶೋಕಸಂತಪ್ತಳಾದಳು. ಅವಳು ಗಂಡನಾದ ಕಶ್ಯಪನಲ್ಲಿ, ತಪದ ಬಲದಿಂದ ಇಂದ್ರನನ್ನು ಕೊಲ್ಲಬಲ್ಲ ಮಗನು ತನಗೆ ಹುಟ್ಟಬೇಕೆಂಬ ಇಚ್ಛೆಯನ್ನು ವ್ಯಕ್ತ ಪಡಿಸಿದಳು. ಅವಳ ಕೋರಿಕೆಯಂತೆ ಮಗನು ಹುಟ್ಟುವನೆಂಬ ವರವನ್ನು ಕಶ್ಯಪನು ಕೊಟ್ಟನು. ಒಂದುಸಾವಿರ ವರ್ಷಗಳವರೆಗೆ ಅವಳು ಪರಿಶುದ್ಧಳಾಗಿರಬೇಕು! ಎಂಬ ಕಟ್ಟಳೆಯನ್ನು ಅವಳು ಒಪ್ಪಿಕೊಂಡಳು. ತಪೋವನಕ್ಕೆ ತೆರಳಿ ದಿತಿಯು ತಪವನ್ನು ಕೈಕೊಂಡಳು. ಒಂಬೈನೂರಾ ತೊಂಬತ್ತು ವರ್ಷಕಾಲ ಅವಳು ಶುಚಿರ್ಭೂತಳಾಗಿದ್ದು, ಇನ್ನು ವ್ರತವು ಪೂರ್ಣವಾಗುವ ಹಂತದಲ್ಲಿತ್ತು. ಈ ಸಮಯದಲ್ಲಿ ಇಂದ್ರನು ಆಕೆಗೆ ತಕ್ಕ ಸೇವೆಯನ್ನು ಸಲ್ಲಿಸುತ್ತಿದ್ದನು. ಹೀಗಿರುವಾಗ ಒಂದು ಮಧ್ಯಾಹ್ನದಲ್ಲಿ ತಲೆದಿಂಬಿನತ್ತ ಕಾಲುಚಾಚಿ ಮಲಗಿದಳು; ಆಗ ಅಪವಿತ್ರತೆಯುಂಟಾಯಿತು. ಇಂದ್ರನಿಗೆ ಎಲ್ಲಿಲ್ಲದ ಸಂತೋಷವಾಯಿತು; ಆತನು ದಿತಿಯ ಶರೀರವನ್ನು ಪ್ರವೇಶಿಸಿ ಗರ್ಭವನ್ನು ಏಳು ಭಾಗಗಳಲ್ಲಿ ತುಂಡರಿಸಿದನು. ನಿಯಮಗಳ ಪಾಲನೆ ಸೂಕ್ತವಾಗಿ ಆಗಲಿಲ್ಲ; ಆದ್ದರಿಂದ ದಿತಿಗೆ ವರವು ಪ್ರಾಪ್ತವಾಗಲಿಲ್ಲ. ಮೇಘನಾದನು ತಪಸ್ಸಿನಿಂದ ಬ್ರಹ್ಮನನ್ನು ಸಂತೋಷಗೊಳಿಸಿದನು; ಬ್ರಹ್ಮನು ಆತನಿಗೆ “ನಿಕುಂಭಿಲೆಯನ್ನು ತಲುಪಿ ನೀನು ಯಾಗವನ್ನು ಪೂರೈಸುವ ಮೊದಲು ಶಸ್ತ್ರಧಾರಿಯಾದ ನಿನ್ನೊಡನೆ ಯಾರು ಯುದ್ಧವನ್ನು ಮಾಡುವರೋ ಆತನಿಂದ ನೀನು ಹತನಾಗುವೆ” ಎಂಬ ಕಟ್ಟಳೆಯ ವರವನ್ನಿತ್ತನು. ಈ ವರದ ಬಗ್ಗೆ ಇನ್ನೊಂದು ಉಲ್ಲೇಖವಿದೆ. ಇಂದ್ರನನ್ನು ಮುಕ್ತಗೊಳಿಸಲು ವರವನ್ನು ಬೇಡಲು ಬ್ರಹ್ಮನು ಮೇಘನಾದನಿಗೆ ಸೂಚಿಸಿದಾಗ ಆತನು 'ಅಮರ'ನಾಗಬೇಕೆಂದು ಬೇಡಿದನು. “ಮೃತ್ಯುಲೋಕದಲ್ಲಿ ಸಂಪೂರ್ಣವಾಗಿ 'ಅಮರ'ವಾಗುವುದು ಸಾಧ್ಯವಿಲ್ಲ” ಎಂದು ಬ್ರಹ್ಮನು ಹೇಳಿದಾಗ ಮೇಘನಾದನು ತನಗೆ ಯಾವ ಸಂದರ್ಭದಲ್ಲಿ ಮರಣ ಬರಬೇಕು. ಮತ್ತು ಆ ಸ್ಥಿತಿ ಇರದಿದ್ದರೆ ವಧೆಯಾಗಕೂಡದು ಎಂಬ ಕಟ್ಟಳೆಯ ವರವನ್ನು ಬ್ರಹ್ಮನಿಂದ ಪಡೆದುಕೊಂಡನು. ಮೇಘನಾದನ ಬೇಡಿಕೆಯಂತೆ ಕಾಳಗಕ್ಕೆ ಹೊರಡುವಾಗ ಅಗ್ನಿಯ ಅಶ್ವಗಳನ್ನು ಹೊಂದಿದ ರಥವು ನನಗಾಗಿ ಸಿದ್ಧವಿರಬೇಕು; ನಾನು ಆ ರಥವನ್ನೇರಿದಾಗ ನನಗೆ ಮರಣ ಬರಕೂಡದು!” (ಉತ್ತರಕಾಂಡ, ೩೦) ಎಂಬುದೇ