ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಋಷಿಯ ಆಗಮನವನ್ನು ರಾಮನಿಗೆ ತಿಳಿಸಿದನು. ಅವರ ಭೇಟಿಯಾಯಿತು. ಆಜ್ಞೆಯನ್ನು ಮೀರಿದುದಕ್ಕಾಗಿ ಲಕ್ಷ್ಮಣನು ತಾನಾಗಿ ಸರಯೂ ನದಿಯಲ್ಲಿ ಆತ್ಮಾರ್ಪಣೆಯ ಶಿಕ್ಷೆಯನ್ನು ವಿಧಿಸಿಕೊಂಡನು. ಲಕ್ಷ್ಮಣನ ವಿಯೋಗದಿಂದ ರಾಮನಿಗೆ ಹೇಳಲಾರದ ದುಃಖವಾಗಿ ಆತನು ಕೂಡ ಲಕ್ಷ್ಮಣನನ್ನು ಹಿಂಬಾಲಿಸಿದನು. ದುರ್ವಾಸನು ಈ ಸಂದರ್ಭದಲ್ಲಿ ನಿಜವಾಗಿ ಶಾಪವನ್ನು ಕೊಟ್ಟಿರಲಿಲ್ಲ; ಆದರೆ ನಡೆದ ಘಟನೆಗಳು ಯಾವುದೇ ಶಾಪದ ಪರಿಣಾಮಕ್ಕಿಂತ ದಾರುಣ, ಕರುಣಾಜನಕವಾಗಿವೆ.

ದಶರಥನಿಂದ ಕೈಕೇಯಿಗೆ ವರದಾನ

ದಶರಥನು ಕೈಕೇಯಿಗೆ ಕೊಟ್ಟ ಎರಡು ವರಗಳಿಗೆ ರಾಮಾಯಣದಲ್ಲಿ ಅಪೂರ್ವವಾದ ಮಹತ್ತ್ವವಿದೆ. ಈ ಎರಡು ವರಗಳಿಂದ ಇಡೀ ರಾಮಾಯಣವು ನಡೆದಿದೆ. ಈ ವರಗಳಿರದಿದ್ದರೆ ರಾಮಾಯಣದ ಸ್ವರೂಪವೇ ಬೇರೆಯಾಗುತ್ತಿತ್ತು. ಸಮಗ್ರಕಥೆಗೆ ವಿಲಕ್ಷಣವಾದ ತಿರುವನ್ನು ಕೊಡುವ ಸಾಮರ್ಥ್ಯ ಈ ವರಗಳಿಗೆ ಇದೆ. ಕೈಕೇಯಿಯ ದೃಷ್ಟಿಯಿಂದ ಅವು ವರಗಳಾಗಿದ್ದರೂ ರಾಮಾಯಣದಲ್ಲಿಯ ಇತರ ವ್ಯಕ್ತಿಗಳಿಗೆ ಭಯಂಕರ ಶಾಪದಂತಾಗಿವೆ. ಬ್ರಹ್ಮನು ರಾವಣನಿಗೆ ಮರ್ಯಾದಿತ ಅಮರತ್ವವನ್ನು ವರವಾಗಿ ಕೊಟ್ಟನು. ಈ ವರವು ಕೈಕೇಯಿಗಿತ್ತ ವರವನ್ನು ಪೋಷಿಸುವಂತೆ, ಉಪಕಾರಕವಾಗುವಂತಿತ್ತು.
ರಾವಣನ ವಧೆಯೇ ಮಾನವಾವತಾರಿಯಾದ ರಾಮನ ಉದ್ದೇಶವಾಗಿತ್ತು. ಅದನ್ನು ಸಾಧಿಸಲು ರಾಮ-ರಾವಣರು ಪರಸ್ಪರ ಎದುರಿಸುವದು ಅಗತ್ಯವಾಗಿತ್ತು. ರಾಮನು ಅಯೋಧ್ಯೆಯಲ್ಲಿದ್ದು ವಧೆಯನ್ನು ಸಾಧಿಸುವುದೆಂತು? ರಾಮನನ್ನು ಅಯೋಧ್ಯೆಯ ಆಚೆ ಕಳುಹಿಸಲು ಯಾವ ಯೋಗ್ಯ ಕಾರಣಗಳೂ ಇರಲಿಲ್ಲ. ಅವನು ದಶರಥನ ಜ್ಯೇಷ್ಠ ಪುತ್ರನು. ಯುವರಾಜ್ಯಪದವಿಗೆ, ಸಾಮ್ರಾಜ್ಯಪದಕ್ಕೆ ಅವನು ಹಕ್ಕುದಾರನಿದ್ದನು. ಇಷ್ಟೇ ಅಲ್ಲದೆ, ಆತನು ತನ್ನ ಸದ್ಗುಣ-ಸದಾಚರಣೆಗಳಿಂದ ಕೈಕೇಯಿಯನ್ನೊಳಗೊಂಡು ಎಲ್ಲರ ಪ್ರೀತಿವಿಶ್ವಾಸವನ್ನು ಗಳಿಸಿ ಕೊಂಡಿದ್ದನು. ಹೀಗಿದ್ದುದರಿಂದ ರಾಮನನ್ನು ಅಲಕ್ಷ್ಯಿಸಿ ಬದಿಗಿಡುವುದು ಸಾಧ್ಯವಿರಲಿಲ್ಲ. ರಾಮಾಯಣದ ಕಥೆಯ ದೃಷ್ಟಿಯಿಂದ ರಾಮನು ಅಯೋಧ್ಯೆಯಿಂದ ಆಚೆ ದೀರ್ಘ ಸಮಯದವರೆಗೆ ಇರುವುದು ಅವಶ್ಯಕವಿತ್ತೆಂಬುದನ್ನು ಬಹು ಕುಶಲತೆಯಿಂದ, ಕೈಕೇಯಿಯ ವರಗಳ ಮುಖಾಂತರ ಸಾಧಿಸಲಾಗಿದೆ. ಈ ಯೋಜಕತೆಯು ವಾಲ್ಮೀಕಿಯ ಸೂಕ್ತ ಕಥಾತಂತ್ರವಾಗಿದೆ. ಈ ವರದ ಉಪಾಯವು