ಸೇರಿದ್ದ ಭೂತವನ್ನು ಓಡಿಸಿ, ೧೨ ವರ್ಷಗಳಿಂದ ಸ್ಥಗಿತವಾಗಿದ್ದ ಪೂಜೆಗೆ
ಮರುಚಾಲನೆಕೊಟ್ಟದ್ದು - ಇವು ಅವುಗಳಲ್ಲಿ ಪ್ರಮುಖವಾದುವು.
ಹರಿಹರ ಸಾಹಿತ್ಯ ಕ್ಷೇತ್ರದಲ್ಲಿ ಅದ್ಭುತವಾದ ಬದಲಾವಣೆಯನ್ನುಂಟು ಮಾಡಿದ
ಕ್ರಾಂತಿಕಾರಿ ಕವಿ. ಪುರಾಣದ ವ್ಯಕ್ತಿಗಳಿಗಾಗಿ, ರಾಜರ ಸ್ತುತಿಗಾಗಿ ಬಳಕೆಯಾಗುತ್ತಿದ್ದ
ಕಾವ್ಯಶಕ್ತಿಯನ್ನು ಶಿವಲೀಲೆ ವರ್ಣನೆಗಾಗಿ, ಶಿವಶರಣರ ಭಕ್ತಿಚರಿತ್ರೆಯ ನಿರೂಪಣೆಗಾಗಿ
ಬಳಸಿಕೊಂಡು 'ಕಾವ್ಯವಸ್ತು'ವಿನಲ್ಲಿ ಅಪೂರ್ವವಾದ ಬದಲಾವಣೆ ಉಂಟು
ಮಾಡಿದನು. ಸಂಸ್ಕೃತ ಅಕ್ಷರವೃತ್ತ, ಕಂದ, ಗದ್ಯಗಳಿಂದ ಸಮ್ಮಿಶ್ರವಾಗಿದ್ದ, ಪಂಡಿತ
ಮಾನ್ಯ ಚಂಪೂರೂಪವನ್ನು ಕೈಬಿಟ್ಟು, ಸರ್ವರಿಗೂ ಸುಲಭ ಗ್ರಾಹ್ಯವಾದ
ರಗಳೆರೂಪವನ್ನು ಕಾವ್ಯಮಾಧ್ಯಮವನ್ನಾಗಿ ಮಾಡಿಕೊಂಡು ಅದರ ಸಾಧ್ಯತೆಗಳನ್ನೆಲ್ಲ
ಸೂರೆಗೈದು - 'ಸಾಹಿತ್ಯರೂಪ'ದಲ್ಲಿ ಪರಿವರ್ತನೆಯನ್ನು ತಂದನು. ಚಂಪೂ ಕಾವ್ಯದಲ್ಲಿ
ಬಳಕೆಯಾಗುತ್ತಿದ್ದ ಸಂಸ್ಕೃತ ಭೂಯಿಷ್ಠ ಹಳೆಗನ್ನಡ ಭಾಷೆಯನ್ನು ತ್ಯಜಿಸಿ
ನಡುಗನ್ನಡದ ಸರಳಭಾಷೆಯಲ್ಲಿ ಕಾವ್ಯರಚನೆ ಮಾಡಿ - 'ಭಾಷಾಬಳಕೆ'ಯಲ್ಲಿ
ನೂತನತೆಯನ್ನು ನಿರೂಪಿಸಿದನು. ಹಾಗೆಯೇ ಕಾವ್ಯಶೈಲಿ, ಕಾವ್ಯಶಿಲ್ಪ, ಕಾವ್ಯ
ರಚನಾತಂತ್ರ, ಕಥಾ ವಿನ್ಯಾಸಗಳಲ್ಲಿಯೂ ಹೊಸತನವನ್ನು ತಂದು, ಹೊಸ ಸಾಹಿತ್ಯ
ಮಾರ್ಗದ ನಿರ್ಮಾಪಕನೆನಿಸಿದನು. ಮುಂದಿನ ಲಿಂಗಾಯತ ಕವಿಗಳಿಗೆ ಅದು
'ಹರಿಹರನ ಉದಿತೋದಿತ ಮಾರ್ಗ' ಎಂದು ಹೆದ್ದಾರಿಯಾಗಿ ಪರಿಣಮಿಸಿತು.
ಹರಿಹರನ ಸಾಹಿತ್ಯ ಸೃಷ್ಟಿ ವಿಪುಲವಾಗಿದೆ; ಶ್ರೀಮಂತವೆನಿಸಿದೆ. ಆತನ
ಕೃತಿಗಳ ಸಂಖ್ಯಾ ನಿರ್ಣಯ ಒಂದು ಸಮಸ್ಯೆಯಾಗಿ ಗಿರಿಜಾ ಕಲ್ಯಾಣ,
ರಕ್ಷಾಶತಕ, ಪಂಪಾಶತಕ, ಮುಡಿಗೆ ಅಷ್ಟಕ ಮತ್ತು ರಗಳೆಗಳು ಈತನ ಕೃತಿಗಳೆಂಬುದು
ಎಲ್ಲರಿಗೂ ತಿಳಿದ ವಿಷಯ. ಈಚೆಗೆ ಎಸ್. ಶಿವಣ್ಣ ಅವರು ವಿರೂಪಾಕ್ಷಾಷ್ಟಕ,
ಹಂಪೆಯರಾಯನ ಶತಕ ಹೆಸರಿನ ಕೃತಿಗಳೂ ಹರಿಹರನವೆಂದು ನಿರ್ಧರಿಸಿ
ಪ್ರಕಟಿಸಿದ್ದಾರೆ. ಆದರೆ ಹರಿಹರ ರಚಿಸಿದ ರಗಳೆಗಳ ಸಂಖ್ಯೆ ಎಷ್ಟು? ಎಂಬುದು
ಇನ್ನೂ ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. ಈಚೆಗೆ ಡಾ. ಎಂ. ಎಂ. ಕಲಬುರ್ಗಿ
ಅವರು (೧೯೯೯) 'ಹರಿಹರನ ರಗಳೆಗಳು' ಎಂಬ ಸಮಗ್ರ ಸಂಪುಟವನ್ನು
ಹೊರತಂದಿದ್ದು, ಅದರಲ್ಲಿ ೧೦೮ ರಗಳೆಗಳನ್ನು ಸಂಗ್ರಹಿಸಿದ್ದಾರೆ. ಅವುಗಳಲ್ಲಿ
ತಮಿಳುನಾಡಿನ ಪುರಾತನರ ರಗಳೆಗಳು ೬೦, ಕನ್ನಡ ನಾಡಿನ ಶರಣರ
ರಗಳೆಗಳು ೨೨ ಮತ್ತು ಸಂಕೀರ್ಣ ರಗಳೆಗಳು ೨೬ ಸಮಾವೇಶಗೊಂಡಿವೆ. ಸದ್ಯಕ್ಕೆ
ಇಷ್ಟನ್ನು ಮಾತ್ರ ಹರಿಹರ ರಚಿತ ರಗಳೆಗಳು ಎಂದು ಸ್ವೀಕರಿಸಿ ಮುಂದೆ
ಹೋಗಬಹುದು.
xiv