ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ನಿನ್ನಂಥ ದೊರೆಯಿರುವಾಗ ನಾನು ಬಯಸಿದ್ದು ದೊರೆಯುವದರಲ್ಲಿ ಏನಾಶ್ಚರ್ಯ ? ಹಿಂದೆ ಮುಂದೆ, ಎಡಕ್ಕೆ ಬಲಕ್ಕೆ, ನಿಂತು ನೀನು ಎನ್ನನ್ನು ಕಾಯುತ್ತಿರುವಿ. ಈ ನಿನ್ನ ಕುರುಹನ್ನು ಕಂಡವರಿಗೆ, ಇಲ್ಲಿಯ ಗುಣವಂತರೆಲ್ಲ ಮಾಡುವದೇನನ್ನು? ಪದ ೯ : ( ಈ ಪದದಲ್ಲಿ ಪರಮಾರ್ಥದ ಅನುಭಾವವನ್ನು ಉತ್ತಮ ವಾದ ಪಾಯಸಕ್ಕೆ ಹೋಲಿಸಿ, ಪರಂಪರಿತ ರೂಪಕದಿಂದ ಇಡಿ ಪರಮಾರ್ಥವನ್ನೆಯ ಬಣ್ಣಿಸಲಾಗಿದೆ. ಸಾರವು ಕೆಳಗಿನಂತೆ. ನೆಲ್ಲು ಕುಟ್ಟುಣು ಬಾರಮ್ಮ ಇಬ್ಬರು ಕೂಡಿ. ಹನ್ನೆರಡು ಹದಿನಾರು ನಲ್ಲೆಯರು ಕೂಡಿಕೊಂಡು, ನಿಲ್ಲದೆ ನೆಲ್ಲು ಕುಟ್ಟುಣು ಬಾರಮ್ಮಾ! ಹೊಕ್ಕಳದ ಒಳ್ಳ ದಲ್ಲಿ, ಪ್ರಾಣದ ಒನಕೆಯಿಂದ, ಹೆರಿ ಹಾಕೋಣ. ವಿವೇಕದ ಅಕ್ಕಿಯನ್ನು ಹಸನುಮಾಡಿ, ಜ್ಞಾನದೃಷ್ಟಿಯಿಂದ ಅದರಲ್ಲಿಯ ಹರಳುಗಳನ್ನು ತೆಗೆಯಮ್ಮ, ವಾಸನಾತ್ರಯದ ಮೂರು ಕಲ್ಲುಗಳನ್ನು ಹೂಡಿ ಒಲೆಯನ್ನು ಮಾಡಿ, ಅದರ ಮೇಲೆ ಪ್ರಾರಬ್ಧದ ಗಡಿಗೆಯನ್ನು ಇಡು. ಅದರ ಕೆಳಗೆ ಕಾಮಕ್ರೋಧಗಳೆಂಬ ಕಟ್ಟಿಗೆಗಳಿಂದ ಉರಿಯ ಮಾಡು ಹೊಗೆಯು ಕಟ್ಟಬಾರದೆಂದು ಒಳಹೊರಗೆ ಪ್ರಪಂಚ-ಪರಮಾರ್ಥಗಳೆರಡನ್ನು ನೋಡು. ಈ ಪಾಯಸವು ಕುದಿಯುವ ಸಮಯದಲ್ಲಿ, ಮೊದಲು ಅದಕ್ಕೆ ಮದದ ಉಕ್ಕು ಬರುವದು. ಧೈರ್ಯದ ಹುಟ್ಟಿನಿಂದ ಅದನ್ನು ಒಳಗೆಯೆ ಕರಗಿಸಿ ಬಿಡು. ಅಂದರೆ ಪ್ರಾರಬ್ಧ-ಯೋಗದಿಂದ ನಿನಗೆ ಪರಮಾನ್ನ ಪಾಯಸವು ದೊರೆಯಬಹುದು. ಸದ್ಗುರುಗಳಿಂದ ಕೂಡಿಕೊಂಡು ನೀನದನ್ನು ಸ್ವಾನಂದದ ಎಡೆಯಲ್ಲಿ ಸವಿಯಯ್ಯಾ ! ಪದ ೧೦ :- ಅಂದು, ಇಂದು, ಎಂದೆಂದೂ, ನಾನು ನಿಮ್ಮನ್ನಗಲಿ ಇಲ್ಲ ಸ್ವಾಮಿ ! ನೀನು ನಿರಾಕಾರನಾದರೆ, ನಾನು ನಿರ್ವಿಕಾರನು. ನೀನು ಪಂಚವದನನಾದರೆ, ನಾನು ನಿನ್ನ ಪಾದಸೇವಕನು. ನೀನು ಜಗಭರಿತನಾದರೆ, ನಾನು ಜಗದೊಳಗಿರುವವನು. ನೀನು ಪ್ರಣವಸ್ವರೂಪಿಯಾದರೆ, ನಾನು ಪ್ರಣವವನ್ನು ಸ್ಮರಿಸುವವನು ಈ ರೀತಿ ನಾನು ನಿನ್ನ ಸಂಗದಲ್ಲಿ ಸದೈವ ಇರುವದರಿಂದ, ನೀನು ಗುರು-ಲಿಂಗ-ಜಂಗಮನಾದರೆ, ನಾನೂ ನೀನೇ ಆಗಿರುವೆನಯ್ಯ !