ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
139

ಕೂಡಿಕೊಂಡರು. ಬಸವೇಶ್ವರನು ಕ್ರಾಂತಿಕಾರಕವಾದ ಒಂದು ಮಾರ್ಗದ, ಮತದ ಸಂಘಟನಕಾರನಾದನು. ಅವನ ಭಕ್ತಿ ಕರ್ಮಗಳು ಸಂಘಟನೆಯ ಭರದಲ್ಲಿದೂಷಿತವಾಗಬಾರದೆಂದು ಪ್ರಭುದೇವನು ತನ್ನ ಜ್ಞಾನ-ವಿರಕ್ತಿಗಳ ಒರೆಗಲ್ಲನ್ನು ಒದಗಿಸಿದನು. ಪ್ರಭುದೇವನ ಜ್ಞಾನದೆತ್ತರವು ಲೋಕದಿಂದ ಅಲಿಪ್ತವಾಗಕೂಡದೆಂದು ಬಸವೇಶ್ವರನು ಅವನಿಗೆ ನಾಯಕಪದವಿಯನ್ನಿತ್ತನು. ಬಸವಣ್ಣನ ವ್ಯಕ್ತಿತ್ವ ಎಷ್ಟು ಹಿರಿದೋ ಅಷ್ಟು ಮಾನವೀಯ, ಅದರ ಸ್ಪಂದನವನ್ನೂ ಹೋರಾಟವನ್ನೂ ನಾವು ಅರ್ಥಮಾಡಿಕೊಂಡು ಅನುಭವಿಸಬಲ್ಲೆವು. ಅವನ ಆರ್ತಭಕ್ತಿ ಕರ್ಮಜೀವನದ ತೊಡಕು, ಸಮಾಜದೂಷಣೆ ಎಲ್ಲವೂ ಒಂದು ಬೆಳೆಯುತ್ತಲಿರುವ ಪ್ರತಿಕೂಲ ಪರಿಸ್ಥಿತಿಯ ಕೂಡ ಹೋಗುತ್ತ ಏರುತ್ತಲಿರುವ, ಮಹಾಜೀವನದ ಸಹಜರಮ್ಯವಾದ ಅಭಿವ್ಯಕ್ತಿ, ಈ ಸೂತ್ರವನ್ನು ಮನದಂದು ಅವನ ವಚನಗಳನ್ನು ಓದಿದರೆ, ಅವನ ವಿಕಾಸಶೀಲವಾದ ಮಹಾ ವ್ಯಕ್ತಿತ್ವ, ಅದನ್ನು ಪರಿಪರಿಯಾಗಿ ಒಡಮೂಡಿಸಿದ ವಚನಸಂಪತ್ತಿ ಇವನ್ನು ಅರಿತುಕೊಳ್ಳಬಹುದು.
“ಬಸವೇಶ್ವರನು ಹಿರಿಯ ಭಕ್ತ ಭಕ್ತಿಭಾಂಡಾರಿ ಎಂದು ಹೆಸರಾಗಿದ್ದಾನೆ. ಆದರೆ ಅವನು ಬೆಳೆಬೆಳೆಯುತ್ತಲೇ ಈ ನೆಲೆಗೆ ಮುಟ್ಟಿದನು. ಇದನ್ನು ಅವನ ವಚನಗಳಲ್ಲಿ ಹೆಜ್ಜೆ ಹೆಜ್ಜೆಗೆ ಕಾಣುತ್ತೇವೆ. ಅವನ ಬೆಳವಣಿಗೆ ಅವನ ರೀತಿಯಲ್ಲಿ ಎಂಬುದನ್ನು ಮಾತ್ರ ಮರೆಯಕೂಡದು. ಯಾವದನ್ನೂ ಯಾರಿಂದಲೂ ಬಚ್ಚಿಡದೆ, ಅವನು ತನ್ನ ಅಂತರಂಗವನ್ನು ತೆರೆದಿಡುತ್ತಾನೆ. ತನ್ನ ದುಃಖವನ್ನು ತಿರುತಿರುವಿ ತೋಡಿಕೊಳ್ಳುತ್ತಾನೆ. ತನ್ನ ಕುಂದುಕೊರತೆಗಳನ್ನು ಆಡಿಕೊಳ್ಳುತ್ತಾನೆ. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೆ. ಉಳಿದೆಲ್ಲ ವಚನಕಾರರಿಗಿಂತ ಹೆಚ್ಚಾಗಿ ಅವನಲ್ಲಿ ಆತ್ಮನಿರೀಕ್ಷಣೆಯ ಪ್ರವೃತ್ತಿಯಿದೆ... ಅವನ ಈ ವಚನಗಳಲ್ಲಿ ಎಲ್ಲ ಸಾಮಾನ್ಯ ಮಾನವರು ತಮ್ಮ ಎದೆಯ ಮಿಡಿತವನ್ನು ಕೇಳುತ್ತಾರೆ. ಆದರೆ ತಮಗಿಂತ ಏನೋ ಬೇರೆ ಎಂಬುದನ್ನು ಅನುಭವಿಸುತ್ತಾರೆ.
————
೩೨. ಕ.ಸಾ.ಚ. ಪು. ೧೫೮