ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
37

ಆದರೆ ಅದರಿಂದ ತನ್ನಲ್ಲಿ ಅಹಂಕಾರ ಬೆಳೆದುದನ್ನು ಕಂಡು, ಅವನ್ನು ತೊರೆದು, ಆತನು ಸಂಗನಿಗೆ ಅನನ್ಯಭಾವದಿಂದ ಸರ್ವಸ್ವವನ್ನು ಅರ್ಪಿಸಿ, ಸಂಗನ ಬಯಕೆಯಂತೆ ನಡೆಯಲು-ನುಡಿಯಲು ತೊಡಗಿದ. ನಿಜವಾಗಿ ಬಸವಣ್ಣನ ಬೆಳಕಿನ ಬಾಳೇ ಒಂದು ಅದ್ಭುತವಾದ ಪವಾಡವಿದ್ದಿತು. ಅದರ ಫಲವಾಗಿಯೂ ಸಂಗನು ಅವನಿಗಾಗಿ ಮೆರೆದ ಕೆಲ ಪವಾಡಗಳ ಫಲವಾಗಿಯೂ ಬಸವಣ್ಣನ ಕೀರ್ತಿಪರಿಮಳವು ಅಲ್ಲಿ ಬಂದ ಭಕ್ತರ ಮುಖಾಂತರ ಕನ್ನಡ ನಾಡಿನಲ್ಲೆಲ್ಲ ಪಸರಿಸಿತು. ಅದು ಗುರುಗಳ ಹಿರಿಮೆಯನ್ನೂ ಮರೆ ಮಾಡಿತು. 'ಶಿಷ್ಯಾದಿಚ್ಛೇತ್ ಪರಾಜಯಂ' ಎಂದು ಭಾವಿಸಿದ ಮುನಿಗೆ ತನ್ನ ಕಾರಣಿಕ ಶಿಷ್ಯನ ಇಂಥ ಹಿರಿಮೆಯನ್ನು ಕಂಡು ತುಂಬ ಸಂತೋಷ ಆಯಿತು. ತಮ್ಮ ಕಾರ್ಯವು ಫಲಿಸಿತು, ತಾವು ಕೃತಾರ್ಥರಾದೆವು ಎಂದು ಅವರಿಗೆನಿಸಿತು.

ಬಸವಣ್ಣನು ಸಂಗಮದಲ್ಲಿದ್ದ ಸುದ್ದಿಯು ಆತನ ಅಕ್ಕಭಾವಂದಿರಿಗೆ ತಿಳಿದೊಡನೆ, ಅವರು ಬಾಗೇವಾಡಿಯನ್ನು ತೊರೆದು ಸಂಗಮದಲ್ಲಿಯ ಆಶ್ರಮದಲ್ಲಿಯೇ ಬಂದು ನಿಂತರು. ಆಶ್ರಮದ ಕೆಲಸದಲ್ಲಿ ಅವರೂ ಭಾಗವಹಿಸಿದರು. ಕೆಲವರುಷಗಳ ತರುವಾಯ ನಾಗಮ್ಮನು ಗರ್ಭವತಿಯಾಗಿ, ಒಂದು ಗಂಡು ಮಗುವನ್ನು ಹೆತ್ತಳು. ಮುನಿಗಳು ಮಗುವಿನ ಮುಂದಿನ ಹಿರಿಮೆಯನ್ನು ಅರಿತು, ಆತನಿಗೆ 'ಚೆನ್ನಬಸವ ಎಂಬ ನಾಮಕರಣವನ್ನು ಮಾಡಿದರು. ಈ ಬಗೆಯಾಗಿ ಬಸವಣ್ಣನೊಡನೆ ಅವರ ಜೀವನವು ಆಶ್ರಮದ ಪಾವನ ಪರಿಸರದಲ್ಲಿ ಆನಂದದಿಂದ ಸಾಗಿತು. ಅವರೂ ತಮ್ಮ ಭಕ್ತಿಯನ್ನು ಬೆಳೆಯಿಸಿಕೊಂಡು ಧನ್ಯರಾದರು.

ಸಂಗನ ಆದೇಶ

ಬಸವಣ್ಣನು ಸದ್ಗುರುಗಳ ಸನ್ನಿಧಿಯಲ್ಲಿ ಸುಮಾರು ಹತ್ತು ವರುಷ ಇದ್ದನು. ಈ ಅವಧಿಯಲ್ಲಿ ಬಸವಣ್ಣನ ಜೀವನ ಒಂದು ವಿಶೇಷವಾದ ಮಟ್ಟವನ್ನು ಮುಟ್ಟಿತು. ಇನ್ನು ಆತನು ತನ್ನ ಮಹಾಕಾರ್ಯವನ್ನು ಪ್ರಾರಂಭಿಸಬೇಕು. ಅದರ ಜತೆಯಲ್ಲಿಯೇ ಮುಂದಿನ ಸಾಧನವನ್ನು