ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

38
ನಡೆಯಿಸಬೇಕು ಎಂದು ಮುನಿಗಳು ಬಗೆದರು. ಆತನ ಮಹಾಕಾರ್ಯದ ಕ್ಷೇತ್ರ ಮಂಗಳವಾಡ ಕಲ್ಯಾಣ. ಅಲ್ಲಿ ಆತನಿಗೆ ಹೋಗಲು ಆಜ್ಞಾಪಿಸಬೇಕೆಂದು ಅವರು ಯೋಚಿಸಿದರು. ಅದೇ ಸಮಯಕ್ಕೆ ಒಂದು ದಿನ ಸಾಯಂಕಾಲ ಬಸವಣ್ಣನು ಸಂಗನನ್ನು ಅರ್ಚಿಸಿ, ಆತನ ಪ್ರಸಾದವನ್ನು ಕೈಕೊಂಡು, ರಂಗಮಂಟಪದಲ್ಲಿ ಧ್ಯಾನಮುದ್ರಾನಿದ್ರೆ' ಯಲ್ಲಿ ಇದ್ದನು. ಆಗ ಪಶುಪತಿಯು ಆತನ 'ಮನದ ಮೊನೆಯೊಳೊಪ್ಪ ಮೂರ್ತಿಗೊಂಡು' ಅಂದನು :
“ಎಲೈ ಮಗನೆ, ಬಸವಣ್ಣ! ನಿನ್ನಂ ಮಹೀತಳದೊಳು ಮೆರೆದಪೆವು. ನೀಂ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಪೋಗು!
ಈ ಮಾತನ್ನು ಕೇಳಿ ಬಸವಣ್ಣನು ಎಚ್ಚತ್ತನು. ಕಣ್ಣೆರೆದು ಅತ್ತಿತ್ತ ನೋಡಿದನು. ಯಾರೂ ಇರಲಿಲ್ಲ. ಆಗ ಈ ಅದ್ಭುತ ಕನಸನ್ನು ಕುರಿತು ಆತನ ಅಂತರಂಗದಲ್ಲಿ ವಿಚಾರಲಹರಿಗಳು ಅಲೆಯತೊಡಗಿದವು. “ಸಂಗನು ನನಗೆ ಮಂಗಳವಾಡಕ್ಕೆ ಹೋಗಲು ಯಾಕೆ ಹೇಳಿರುವ? ಅಲ್ಲಿ ಅದೆಂಥ ವೈಭವವು ನನ್ನನ್ನು ಕಾದಿರುವದು? ಆದರೆ ಅದಕ್ಕಾಗಿ ನಾನು ಸಂಗನಿಂದ ಅಗಲಬೇಕಲ್ಲ? ಸಂಗನಿಲ್ಲದ ವೈಭವವು ಅದೆಂಥ ವೈಭವ? ಅದಕ್ಕೆ ಬೆಲೆಯೇನು? ಅದನ್ನೆಳಸಿ ನಾನು ಸಂಗನನ್ನು ತೊರೆಯಬೇಕೆ? ತೊರೆಯುವದು ಉಚಿತವೇ? ಸರಿಯೇ? ಆದರೆ ಸಂಗನಾದರೂ ನನಗೆ ಹಾಗೇಕೆ ಆಜ್ಞಾಪಿಸಿರಬೇಕು? ಆತನ ಆಜ್ಞೆಯ ಉದ್ದೇಶವೇನು? ಆತನು ಸುಮ್ಮಸುಮ್ಮನೆ ಆಜ್ಞಾಪಿಸಲರಿಯ. ಆದುದರಿಂದ ಆತನ ಆಜ್ಞೆಯನ್ನು ಮೀರಬೇಕೆ? ಮೀರುವದು ಸರಿಯೇ? ಒಂದೆಡೆ ಸಂಗನ ಅಗಲಿಕೆ, ಇನ್ನೊಂದೆಡೆ ಸಂಗನ ಆಜ್ಞಾಭಂಗ! ಯಾವುದನ್ನು ಮಾಡಲಿ? ಯಾವುದನ್ನು ಬಿಡಲಿ? ಆಗ ಬಸವಣ್ಣನು ತುಂಬ ಇಕ್ಕಟ್ಟಿನಲ್ಲಿ ಸಿಲುಕಿದ. ಕೊನೆಗೆ, ಮುಂಬರುವ ವೈಭವವನ್ನು ತೊರೆಯಬಹುದು, ಆದರೆ ಅಗಲಿಕೆಯ ದುಃಖವನ್ನು ಸಹಿಸುವದು ಸಾಧ್ಯವಿಲ್ಲ ಎಂದು ಆತನು ನಿರ್ಣಯಿಸಿದನು.