ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

54
ರಾಯನಿಗೆ ಬರೆದ ಈ ಉತ್ತರದ ಜತೆಯಲ್ಲಿ ಅವರು ಬಸವಣ್ಣನವರಿಗೂ ಒಂದು ಕಾಗದವನ್ನು ಬರೆದು ಅದರಲ್ಲಿ ಮೇಲ್ಕಾಣಿಸಿದ ತಮ್ಮ ಅಭಿಪ್ರಾಯವನ್ನು ಅವರಿಗೆ ತಿಳಿಸಿದರು.
ಬಿಜ್ಜಳ ದೊರೆಯು ಮುನಿಗಳ ಉತ್ತರವನ್ನು ಓದಿ, ಶಿವದೀಕ್ಷೆಯ ಬಗೆಗೆ ಮೊದಲು ತಂಗಿ ನೀಲಲೋಚನೆಯ ಅಭಿಮತವನ್ನು ಕೇಳಿಕೊಂಡನು. ಬಾಲ್ಯದಲ್ಲಿಯೇ ಅವಳ ತಾಯಿ ತೀರಿಕೊಂಡ ಮೂಲಕ ನೀಲಲೋಚನೆ ತನ್ನ ತಮ್ಮ ಕರ್ಣಿದೇವನೊಡನೆ ಸಿದ್ಧರಸನ ಮನೆಯಲ್ಲಿಯೇ ಬೆಳೆದಿದ್ದಳು. ಮಕ್ಕಳಿಗಾಗಿ ಹಂಬಲಿಸುವ ಅವನ ಪತ್ನಿಯು ಅವರಿಬ್ಬರನ್ನು ತನ್ನ ಮಕ್ಕಳೆಂದೇ ಬಗೆದು ಒಳ್ಳೆಯ ನಲ್ಮೆಯಿಂದ ಬೆಳೆಸಿದ್ದಳು. ಆದುದರಿಂದ ಆ ಶೈವಕುಟುಂಬದ ಬಗೆಗೂ ಅವರ ಧರ್ಮದ ಬಗೆಗೂ ನೀಲಮ್ಮನಲ್ಲಿ ಬಾಲ್ಯದಿಂದಲೇ ಆದರವು ನೆಲೆಸಿದ್ದಿತು. ಅದೇ ಮೇರೆಗೆ ಅವಳು ಬಸವಣ್ಣನವರಲ್ಲಿಯೂ ತುಂಬ ಪ್ರೀತಿ- ಆದರಗಳನ್ನು ತಳೆದಿರುವ ಮೂಲಕ, ಹಾಗೂ ಅವರ ಪ್ರಭಾವವನ್ನು ಕಂಡು ಮನಸೋತವಳಾದ ಮೂಲಕ, ಅವಳು ಶಿವದೀಕ್ಷೆಯನ್ನು ಪಡೆಯಲು ಕೂಡಲೇ ಒಪ್ಪಿಕೊಂಡಳು. ಬಿಜ್ಜಳರಾಯನೂ ಅದಕ್ಕೆ ಒಪ್ಪಿದನು. ಆದುದರಿಂದ ಸದ್ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬಸವಣ್ಣನವರು ಈ ಎರಡನೆಯ ವಿವಾಹವನ್ನು ಮಾಡಿಕೊಳ್ಳಲು, ಗಂಗಾದೇವಿಯ ಒಪ್ಪಿಗೆಯನ್ನು ಪಡೆದುಕೊಂಡು, ತಮ್ಮ ಅನುಮತಿಯನ್ನು ತಿಳಿಸಿದರು.

ತರುವಾಯ ಬಿಜ್ಜಳರಾಯನು ನೀಲಲೋಚನೆಯನ್ನು ಶಿವದೇವ ನಾಗಮ್ಮರೊಡನೆಯೂ ಹಾಗೂ ತಮ್ಮ ಕೆಲ ಹಿರಿಯ ಸೇವಕರೊಡನೆಯೂ ಸಂಗಮಕ್ಷೇತ್ರಕ್ಕೆ ಕಳುಹಿದನು. ಈಶಾನ್ಯ ಮುನಿಗಳು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ನೀಲಲೋಚನೆಗೆ ಯಥಾವಿಧಿ ಶಿವದೀಕ್ಷೆಯನ್ನು ದಯಪಾಲಿಸಿದರು. ಅವರನ್ನು ಒಂದೆರಡು ದಿನ ತಮ್ಮಲ್ಲಿಟ್ಟುಕೊಂಡು ಮರಳಿ ಕಲ್ಯಾಣಕ್ಕೆ ಕಳುಹಿಸಿದರು. ಆಮೇಲೆ ಒಂದು ಶುಭಮುಹೂರ್ತಕ್ಕೆ ಬಸವಣ್ಣನವರೊಡನೆ ಅವಳ ವಿವಾಹವು-