ವಿಷಯಕ್ಕೆ ಹೋಗು

ಪುಟ:ಸುವರ್ಣಸುಂದರಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಂದೆಯ ಬಳಿಗೆ ಬಂದಳು. ಆಕೆಯನ್ನು ಬದುಕಿಸಿದ ವಿಷಯವೇ ಅವಳಿಗೆ ಸ್ವಲ್ಪವೂ ತಿಳಿಯದು. ಸುವರ್ಣಶೇಖರನೂ ಮಗಳಿಗೆ ತನ್ನ ದಡ್ಡತನದ ವಿಷಯವಾಗಿ ಏನೂ ಹೇಳಲಿಲ್ಲ. ತನಗೆ ಆಗ ಪ್ರಾಪ್ತವಾಗಿದ್ದ ಶಕ್ತಿಯನ್ನು ಮಾತ್ರ ತೋರ್ಪಡಿಸಿದನು. ಮಗಳಾದ ಸುವರ್ಣಸುಂದರಿಯನ್ನು ತೋಟದೊಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿರುವ ಪುಷ್ಪಗಳ ಮೇಲೆಲ್ಲಾ ನದಿಯಿಂದ ತಂದ ನೀರನ್ನು ಚಿಮುಕಿಸಿದ ಸಾವಿರಾರು ಪುಷ್ಪಗಳೆಲ್ಲ ಏಕಕಾಲದಲ್ಲಿ ತಮ್ಮ ಪೂರ್ವಸ್ಥಿತಿಯನ್ನು ಪಡೆದು ಸುವಾಸನೆಯಿಂದ ಶೋಭಿಸಿದವು. ಸುವರ್ಣಶೇಖರನು ತನ್ನ ಜೀವಮಾನದಲ್ಲೆಲ್ಲ ತನ್ನ ಸ್ಥಿತಿಯನ್ನು ಜ್ಞಾಪಿಸಿಕೊಳ್ಳುತ್ತಲೇ ಇದ್ದನು.

ಮಕ್ಕಳಿರಾ, ಸುವರ್ಣಶೇಖರನ ಕಥೆಯನ್ನು ಕೇಳಿದಿರಾ! ಎಷ್ಟು ಸ್ವಾರಸ್ಯವಾಗಿದೆ. ನಾನು ನಿಮಗೆ ಹೇಳಿದಂತೆಯೇ ತನ್ನ ಕಥೆಯನ್ನು ಸುವರ್ಣಶೇಖರನು ತನ್ನ ಮೊಮ್ಮಕ್ಕಳಿಗೆ ಆಗಾಗ್ಗೆ ಹೇಳುತ್ತಲೇ ಇದ್ದನು. ಇಂತಕ ಕಥೆಯನ್ನು ನೀವು ಬೇರೆ ಇದುವರೆಗೆ ಕೇಳಿರಲಾರಿರಿ. ಈ ಕಥೆಯನ್ನು ಓದಿದ ಮೇಲೆ ನಿಮಗೆ ಸುವರ್ಣಸ್ಪರ್ಶದ ವರವೂ ಸಿದ್ಧಿಸಬೇಕೆಂದು ಆಶೆಯಾಗುವುದೇ? ಕೆಲವರಿಗೆ ಪದಾರ್ಥಗಳನ್ನು ಬಲಗೈಂದ ಮುಟ್ಟಿದರೆ ಅವು ಚಿನ್ನವಾಗುವುದೂ, ಪುನಃ ಬೇಡವಾದಾಗ ಎಡಗೈಯಿಂದ ಮುಟ್ಟಿದರೆ ಮೊದಲಿನಂತಾಗುವುದೂ - ಈ ಎರಡು ಶಕ್ತಿಯೂ ಇದ್ದರೆ ಒಳ್ಳೆಯದೆಂದು ತೋರಬಹುದು. ಆದರೆ ಅಂತಹ ಶಕ್ತಿಯನ್ನು ಕೊಡುವ ಮಹಾತ್ಮನನ್ನು ಬೇರೆ ನೀವು ಕಂಡು ಹಿಡಿಯಲಾರಿರಿ.

————0————