ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೫೭

ವಿನೋದ - ಸಂಕುಚಿತಭಾವದಿಂದ, - ನನ್ನ ಪತ್ನಿಯ ವಿಚಾರವಾಗಿ ತಾವು ಹೇಳಿದುದೆಲ್ಲಾ ನಿಜವೆ? ಏನಾದರೂ ಸಾಕ್ಷ್ಯವಂಟೇ! ಅವಳು ನಿಜವಾಗಿಯೂ ಪಾತಿವ್ರತ್ಯವನ್ನು ಕಳೆದುಕೊಂಡಿರುವಳೆ?

ಗಿರಿಯಮ್ಮ - ಮೊಗದಿರುಹಿ "ನಿನ್ನ ಹೆಂಡತಿಯ ಗುಣವನ್ನು ನೀನೇ ಹೊಗಳಿಕೊಳ್ಳಬೇಕು. ಅವಳ ಗುಣಗಳಲ್ಲಿ ಒಂದನ್ನೊಂದೇ ಮೀರಿಸುತ್ತಿದೆ. ಇರಲಿ; ಹೋಗಪ್ಪ| ಸಾಕು! ಸಾಕು!!

ವಿನೋದ - ಇದೆಲ್ಲವೂ ಏಕೆ? ನೀವೇನಾದರೂ ನಿಜವಾದ ಸಂಗತಿಯನ್ನು ಬಲ್ಲಿರೊ?

ಗಿರಿಯಮ್ಮ - ಸುಳ್ಳನ್ನು ಹೇಳಿ ನನ್ನ ಮನೆಗೆ ಚಿನ್ನದ ಕಳಸವನ್ನು ಹಾಕಿಸುತ್ತೇನಪ್ಪ! ಅವಳು ನಿನ್ನೆಯ ರಾತ್ರಿ ನಿನ್ನ ಪಡ್ಡಕ ತಂತ್ರನಾಥನೊಡನೆ ಓಡಿಹೋಗಲು ಸಿದ್ಧಳಾಗಿದ್ದಳು. ನಾನೇ ನೋಡಿದೆ. ಅವನು ಧರ್ಮಕ್ಕೂ ನಿನಗೂ ಹೆದರಿ ಹೇಗೋ ತಪ್ಪಿಸಿಕೊಂಡು ಓಡಿಬಂದನು. ಲಜ್ಜೆಗೆಟ್ಟು ಬೀದಿಯಲ್ಲಿ ನಿಲ್ಲದಿದ್ದರೂ, ಒಳಗೇ ಎಂತೆಂತಹ ಕೆಲಸಗಳನ್ನು ಮಾಡುವಳೆಂದು ಬಲ್ಲೆ? ನೀನಂತು, ನಿಮ್ಮ ಅಪ್ಪ ಅಜ್ಜಂದಿರು ಗಳಿಸಿಟ್ಟಿದ್ದ ದ್ರವ್ಯವೆಲ್ಲವನ್ನೂ ಕಸಕ್ಕೂ ಕಡೆಯಾಗಿ ಹಾಳುಮಾಡುತ್ತಿರುವೆ| ನಿಮ್ಮಿಬ್ಬರ ದುರ್ವರ್ತನದಿಂದ ನಮ್ಮ ಜನಕ್ಕೇ ಅಗೌರವವುಂಟಾಗಿದೆ.' ಹೀಗೆ ಹೇಳುತಿದ್ದಂತೆಯೇ ಗಿರಿಯಮ್ಮನ ಮುಖವು ಕೆಂಪೇರಿ ಕೋಪದಿಂದ ಮಯ್ನಡುಗುವಂತಾಯ್ತು. ಗಂಡನ ಕಡೆಗೆ ತಿರುಗಿ ಕರ್ಕಶಸ್ವರದಿಂದ ನಿಮಗೆ ಸ್ವಲ್ಪವೂ ಬುದ್ಧಿಯಿಲ್ಲ! ಇಂತಹ ಪೋಕರಿ ಹುಡುಗರನ್ನೆಲ್ಲ ಮನೆಗೆ ಸೇರಿಸುವಿರಿ! ಇಂತವರಿಂದ ನಿಮಗಾಗುವ ಆದಾಯವೇನು? ಈಗಳೂ ಹೊರಗೆ ಕಳಿಸಬಾರದೆ? ನಿಮಗೇಕೆ ಈ ಮಂಕುಬುದ್ದಿ?”